ಬೆಂಗಳೂರು: ವಿಮಾನ ನಿಲ್ದಾಣ ಮಾದರಿಯ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಬೈಯ್ಯಪ್ಪನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನಲ್ಲಿ ಸೋಮವಾರದಿಂದ ರೈಲು ಸಂಚಾರ ಆರಂಭಗೊಂಡಿದೆ. ಬಾಣಸವಾಡಿ-ಎರ್ನಾಕುಲಂ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ನೂತನ ಟರ್ಮಿನಲ್ನ ಒಂದನೇ ಪ್ಲಾಟ್ ಫಾರಂನಿಂದ ಲೋಕೋ ಪೈಲಟ್ ಕಾರ್ತಿಗೆಯನ್ ಚಾಲನೆ ನೀಡಿದರು. ಈ ಮೂಲಕ ದೇಶದ ಮೊದಲ ಎಸಿ ರೈಲು ನಿಲ್ದಾಣದಲ್ಲಿ ರೈಲು ಸಂಚಾರ ಆರಂಭವಾಯಿತು.
ಈ ಎರ್ನಾಕುಲಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸರ್.ಎಂ .ವಿಶ್ವೇಶ್ವರಯ್ಯ ರೈಲು ನಿಲ್ದಾಣ ಮೂಲಕ ಕೆ.ಆರ್.ಪುರ, ಬಂಗಾರ ಪೇಟೆ, ಈರೋಡ್, ತಿರುಪತ್ತೂರು, ಸೇಲಂ, ಪಾಲಕಾಡ್ ಮೂಲಕ ಎರ್ನಾಕುಲಂ ತಲುಪಲಿದೆ. ನೂರಾರು ಸಾರ್ವಜನಿಕರು ರೈಲು ನಿಲ್ದಾಣದಕ್ಕೆ ಬಂದು ವಿಶೇಷವಾಗಿ ಶುಭಾಶಯ ತಿಳಿಸಿದರು. ರೈಲು ಓಡಾಟ ಆರಂಭವಾಗುತ್ತಿರುವ ಹಿನ್ನೆಲೆ ನಿನ್ನೆಯಿಂದಲೇ ಟಿಕೆಟ್ ಕೌಂಟರ್, ಲಿಫ್ಟ್, ಆಹಾರ ಮಳಿಗೆಗಳು, ಪಾರ್ಕಿಂಗ್, ಬಿಎಂಟಿಸಿ ಬಸ್ ಸೇರಿದಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಆರಂಭವಾಗಿದೆ.
ಹೊರನೋಟಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೋಲುವ ಈ ಟರ್ಮಿನಲ್, ಹವಾನಿಯಂತ್ರಿತ ವ್ಯವಸ್ಥೆ, ಫ್ಲಾಟ್ ಫಾರ್ಮ್‌ಗಳು, ವಿಶ್ರಾಂತಿ ಕೊಠಡಿ, ಶೌಚಾಲಯ, ಬಸ್ ಬೇ, ವಿಶಾಲವಾದ ವಾಹನ ನಿಲುಗಡೆ ಸ್ಥಳ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಇಲ್ಲಿನ ಸೌಲಭ್ಯಗಳು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವ ನೀಡಿದೆ.
ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣದ ಬಳಿಕ ನಗರದ 3ನೇ ಕೋಚಿಂಗ್ ಟರ್ಮಿನಲ್ ಇದಾಗಿದೆ. ನಗರದ ಪ್ರಮುಖ ಎರಡು ರೈಲು ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಹಾಗೂ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ 314 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಮಾದರಿಯಲ್ಲಿ ಇದನ್ನು ನಿಲ್ದಾಣ ನಿರ್ಮಾಣ ಮಾಡಲಾಗಿದೆ.
ಈ ನಿಲ್ದಾಣದಲ್ಲಿ ವೇಳಾಪಟ್ಟಿಯಂತೆ ಟರ್ಮಿನಲ್‌ನಲ್ಲಿ ವಾರದಲ್ಲಿ ಮೂರು ರೈಲುಗಳು ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲುಗಳ ಸೇವೆಯನ್ನು ಆರಂಭಿಸಲಾಗುವುದು ಎಂದು ನೈಋುತ್ಯ ರೈಲ್ವೆ ತಿಳಿಸಿದೆ. ಟರ್ಮಿನಲ್ ಮೇಲ್ವರ್ಗದ ವೈಟಿಂಗ್ ಹಾಲ್, ಡಿಜಿಟಲ್ ರಿಯಲ್-ಟೈಮ್ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಮತ್ತು ವಿಐಪಿ ವಿಶ್ರಾಂತಿ ಕೊಠಡಿಯನ್ನು ಹೊಂದಿವೆ. ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ 7 ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುವಂತೆ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳು ಇವೆ.
ಹೊಸ ಟರ್ಮಿನಲ್ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ 1.5 ಕಿ.ಮೀ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ 1.2 ಕಿ.ಮೀ ದೂರವಿದ್ದು, ಮೆಟ್ರೋ ನಿಲ್ದಾಣ, ಮೆಜೆಸ್ಟಿಕ್, ಕೆ.ಆರ್. ಪುರದಿಂದ ಬಿಎಂಟಿಸಿ ಬಸ್ ಸೇವೆ ಕಲ್ಪಿಸಲಾಗಿದೆ.
ದೇಶದ ಮೊದಲ ಹವಾ ನಿಯಂತ್ರಿತ ನಿಲ್ದಾಣ : ನೈಋತ್ಯ ರೈಲ್ವೆ ಸುಮಾರು 314 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ ರೈಲು ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ಈ ಮೂಲಕ ಬೆಂಗಳೂರಿನ ಭವ್ಯ ಕಟ್ಟಡಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. 4,200 ಚದರ ಮೀಟರ್ ವಿಸ್ತೀರ್ಣದ ಈ ರೈಲು ನಿಲ್ದಾಣದಲ್ಲಿ ಡಿಜಿಟಲ್ ಮೂಲಕ ರೈಲು ಸಂಚಾರದ ರಿಯಲ್ ಟೈಂ ಮಾಹಿತಿ ಪ್ರಯಾಣಿಕರಿಗೆ ಸಿಗಲಿದೆ. 4 ಲಕ್ಷ ಲೀಟರ್ ನೀರಿನ ಮರುಬಳಕೆ ಘಟಕ, ವಿಐಪಿ ಲಾಂಜ್, ಫುಡ್‌ಕೋರ್ಟ್, 250 ನಾಲ್ಕು ಚಕ್ರ, 900 ಬೈಕ್‌ಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಈ ನಿಲ್ದಾಣದಲ್ಲಿವೆ. ಇದು 7 ಫ್ಲಾಟ್‌ಫಾರಂಗಳನ್ನು ಹೊಂದಿದ್ದು, ನಿಲ್ದಾಣದಿಂದ 50 ಜೋಡಿ ರೈಲುಗಳನ್ನು ಓಡಿಸಲು ಇಲಾಖೆ ಗುರಿ ಹೊಂದಿದೆ.
ಇದನ್ನೂ ಓದಿ: ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆಯಲಿದೆ ಬಂದೇಲ್ ರೈಲು ನಿಲ್ದಾಣ : ಯಾಕೆ ಗೊತ್ತಾ!?