ಬೆಂಗಳೂರು: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಪಡಿಸಿ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಒಟ್ಟು 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ತನಿಖೆ ವೇಳೆ ಹೊರಬಂದಿರುವ ಕಾರಣ ಸರ್ಕಾರವು ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ಸೇವೆಯಲ್ಲಿರುವವರು, ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನೊಳಗೊಂಡಂತೆ ಮತ್ತು ಸಾಮಾನ್ಯ ಅಭ್ಯರ್ಥಿಗಳಿಂದ 545 ಪಿಎಸ್‌ಐ ಹುದ್ದೆಗೆ 2021ರ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಪರೀಕ್ಷೆ ನಡೆಸಲಾಗಿತ್ತು. ಅಕ್ರಮ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಗೊಳಿಸಿ ಹೊಸದಾಗಿ ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಆದೇಶಿಸಲಾಗಿದೆ.
ಒಎಂಆರ್ ಹಾಳೆಗಳ ಮೂಲಕ ಹೆಚ್ಚಿನ ಪುರಾವೆಗಳ ಹುಡುಕಾಟ: ಎಲ್ಲಾ 545 ಅಭ್ಯರ್ಥಿಗಳ ಒಎಂಆರ್ ಹಾಳೆಗಳ ವಿಧಿವಿಜ್ಞಾನ ಪರೀಕ್ಷೆ ನಡೆಸುವುದು, ಶಂಕಿತ ವಿಫಲ ಅಭ್ಯರ್ಥಿ ಒಎಂಆರ್ ಹಾಳೆಗಳ ವಿಧಿ ವಿಜ್ಞಾನ ಪರೀಕ್ಷೆ ನಡೆಸಬೇಕು. ಎಲ್ಲಾ 92 ಪರೀಕ್ಷಾ ಕೇಂದ್ರಗಳಿಂದ ಡಿಜಿಟಲ್ ಪುರಾವೆಗಳ ಸಂಗ್ರಹಿಸಿ ವಿಶ್ಲೇಷಣೆ ಮಾಡುವುದು. ದುಷ್ಕೃತ್ಯದಲ್ಲಿ ಇತರ ವಿಧಾನಗಳನ್ನು ಅನುಸರಿಸಿದ್ದರೆ ಪತ್ತೆ ಹಚ್ಚಬೇಕು ಮತ್ತು ತನಿಖೆ ಮಾಡಬೇಕು. ವಿಚಾರಣೆ ಆರಂಭಿಸಿದ ಬಳಿಕ ಹಲವರು ತಲೆಮರೆಸಿಕೊಳ್ಳುವ ಸಾಧ್ಯತೆ ಇರುವ ಕಾರಣ ಇಂತಹ ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳು ಮತ್ತು ಪಿತೂರಿಗಾರರನ್ನು ಬಂಧಿಸಿ ಪ್ರಶ್ನಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
![PSI Exam Cancellation](https://etvbharatimages.akamaized.net/etvbharat/prod-images/15161579_thu.jpg)
ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಒಎಂಆರ್ ಹಾಳೆಗಳು ಪರಿಶೀಲನೆಯಲ್ಲಿದ್ದು, ಅಭ್ಯರ್ಥಿಗಳಿಂದ ಒಎಂಆರ್ ಹಾಳೆಗಳ ನಕಲು ಪ್ರತಿಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಂಗ್ರಹಿಸಲಾದ ಒಎಂಆರ್ ಹಾಳೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಕಲಬುರಗಿ ಕೇಂದ್ರದಿಂದ 5 ಒಎಂಆರ್ ಹಾಳುಗಳು ಮತ್ತು ಬೆಂಗಳೂರಿನ ವಿವಿಧ ಏಳು ಕೇಂದ್ರಗಳ 22 ಒಎಆರ್ ಹಾಳೆಗಳು ಸಂದೇಹಾಸ್ಪದವಾಗಿರುತ್ತದೆ. ಇದರ ನಡುವೆಯೂ ಹೆಚ್ಚಿನ ಸಂಖ್ಯೆಯ ಒಎಂಆರ್ ಹಾಳೆಗಳನ್ನು ಪರೀಶಿಲಿಸಲಾಗುತ್ತಿದೆ.
ಪಿಎಸ್‌ಐ ಹುದ್ದೆಗೆ ಮತ್ತೆ ಹೊಸದಾಗಿ ಮರು ಪರೀಕ್ಷೆಯನ್ನು ನಡೆಸಲಾಗುವುದು. ಶೀಘ್ರದಲ್ಲಿಯೇ ದಿನಾಂಕವನ್ನು ಪ್ರಕಟಿಸಲಾಗುವುದು. ಆಯ್ಕೆಯಾಗಿರುವ ಅಭ್ಯರ್ಥಿಗಳು ಸಹ ಪರೀಕ್ಷೆ ಬರೆಯಬೇಕು. ಆಪಾದಿತರನ್ನು ಬಿಟ್ಟು ಅರ್ಜಿ ಸಲ್ಲಿಸಿದವರಿಗೆ ಮರು ಪರೀಕ್ಷೆ ನಡೆಸಲು ಅವಕಾಶ ನೀಡಲಾಗುವುದು. ಕಳೆದ 2021ರ ಅಕ್ಟೋಬರ್ ತಿಂಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ರಾಜ್ಯಾದ್ಯಂತ 54,289 ಅಭ್ಯರ್ಥಿಗಳು ಹಾಜರಾಗಿದ್ದರು. ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ, ಅಕ್ರಮ ನಡೆದಿರುವ ಕಾರಣ ಮರುಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.. ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ನೀಡಿ ಆದೇಶ