ಬೆಂಗಳೂರು : ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಗೌರವ್ ಗುಪ್ತ, ಆಯುಕ್ತರಾಗಿದ್ದ ಎನ್.ಮಂಜುನಾಥ್ ಪ್ರಸಾದ್ ಸೇರಿದಂತೆ 16 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕೆಲ ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಹೆಸರುಗಳು ಹಾಗೂ ಹುದ್ದೆಗಳು ಈ ಕೆಳಕಂಡಂತಿದೆ..
ಬಿಬಿಎಂಪಿ ಆಡಳಿತಾಧಿಕಾರಿ ಹುದ್ದೆ ನಿಭಾಯಿಸುತ್ತಿದ್ದ ಗೌರವ್ ಗುಪ್ತ ಅವರನ್ನು ಬಿಬಿಎಂಪಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಜತೆಗೆ ಹೆಚ್ಚುವರಿಯಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆ ನೀಡಿದೆ.
![order copy](https://etvbharatimages.akamaized.net/etvbharat/prod-images/kn-bng-08-ias-transfer-script-7208083_31032021204130_3103f_1617203490_189.jpg)
ಗೌರವ್ ಗುಪ್ತ ವರ್ಗಾವಣೆಯಿಂದ ತೆರವಾದ ಬಿಬಿಎಂಪಿ ಆಡಳಿತಾಧಿಕಾರಿ ಹುದ್ದೆಯ ಹೊಣೆಯನ್ನು ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಹೆಚ್ಚುವರಿಯಾಗಿ ನೀಡಿದೆ.
ಬಿಬಿಎಂಪಿ ಆಯುಕ್ತರಾಗಿದ್ದ ಎನ್.ಮಂಜುನಾಥ್ ಪ್ರಸಾದ್ ಅವರನ್ನು ಖಾಲಿ ಇದ್ದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಿದ್ದು, ಜತೆಗೆ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ-ಭೂಮಿ) ಪ್ರಧಾನ ಕಾರ್ಯದರ್ಶಿ ಹುದ್ದೆ ಹೆಚ್ಚುವರಿಯಾಗಿ ವಹಿಸಿದೆ.
ಇದನ್ನೂ ಓದಿ: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವರ್ಗಾವಣೆ: ಗೌರವ್ ಗುಪ್ತ ನೂತನ ಆಯುಕ್ತ
ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಿ.ಕುಮಾರ್‌ನಾಯಕ್ ಅವರನ್ನು ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಿದ್ದು, ಹಾಲಿ ಇದ್ದ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕಮ್ ಅಭಿವೃದ್ಧಿ ಆಯಕ್ತೆ ಬೆಂಗಳೂರು ಹುದ್ದೆಯಲ್ಲಿರುವ ವಂದಿತ ಶರ್ಮಾ ಅವರಿಗೆ ಮಹೇಂದ್ರ ಜೈನ್ ಅವರ ನಿವೃತ್ತಿಯಿಂದ ತೆರವಾದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
![order copy](https://etvbharatimages.akamaized.net/etvbharat/prod-images/kn-bng-08-ias-transfer-script-7208083_31032021204130_3103f_1617203490_1058.jpg)
ರಾಜೀವ್ ಚಾವ್ಲಾ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಆಡಳಿತ ಸುಧಾರಣೆ) ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಗೆ, ಕಪಿಲ್ ಮೋಹನ್ ಅವರನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಗೆ, ಸಿಂಧು ಬಿ.ರೂಪೇಶ್ ಅವರನ್ನು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿ, ಎಸ್.ಹೊನ್ನಾಂಬ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಸ್ಥಾನಕ್ಕೆ, ಡಾ.ಬಿ.ಆರ್. ಮಮತ ಅವರನ್ನು ಸಕಾಲ ಮಿಷನ್ ಹೆಚ್ಚುವರಿ ಮಿಷನ್ ಡೈರೆಕ್ಟರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: 'ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ, ಆಂತರಿಕ ವಿಚಾರವನ್ನು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ'
ಅಲ್ಲದೆ, ಡಾ.ಎಚ್.ಎನ್.ಗೋಪಾಲಕೃಷ್ಣ ಅವರನ್ನು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ (ಕೆಪಿಎಲ್‌ಸಿ) ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಿದ್ದು, ಐಟಿಬಿಟಿ ನಿರ್ದೇಶಕ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
![order copy](https://etvbharatimages.akamaized.net/etvbharat/prod-images/kn-bng-08-ias-transfer-script-7208083_31032021204130_3103f_1617203490_803.jpg)
ಜಿ.ಎಂ.ಗಂಗಾಧರ ಸ್ವಾಮಿ ಅವರನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಿ ಜತೆಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಆಡಳಿತ ಮತ್ತು ಮಾನವ ಸಂಪನ್ಮೂಲ) ಪ್ರಧಾನ ವ್ಯವಸ್ಥಾಪಕ ಹುದ್ದೆ ನೀಡಲಾಗಿದೆ.
ಕೆ. ವಿದ್ಯಾಕುಮಾರಿ ಅವರನ್ನು ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆಗೆ, ಜಯವಿಭವಸ್ವಾಮಿ ಅವರನ್ನು ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಿ ಹೆಚ್ಚುವರಿಯಾಗಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜವಾಬ್ದಾರಿ ವಹಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ಹೆಚ್ಚುವರಿಯಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಎಂಎಸ್‌ಎಂಇ ಮತ್ತು ಮೈನ್ಸ್) ಕಾರ್ಯದರ್ಶಿ ಹುದ್ದೆ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ಅವರಿಗೆ ಹೆಚ್ಚುವರಿಯಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಗೌರ‌್ನೆನ್ಸ್) ಹುದ್ದೆ ವಹಿಸಲಾಗಿದೆ.