ಯಲಹಂಕ (ಬೆಂಗಳೂರು) : ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಜೊತೆ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿದ್ದ ಲ್ಯಾನ್ಸ್ ನಾಯ್ಕ್ ಸಾಯಿ ತೇಜಾ ಅವರಿಗೆ ಯಲಹಂಕ ವಾಯುನೆಲೆಯಲ್ಲಿ ಸೇನಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದ್ದಾರೆ.
ದೆಹಲಿಯಿಂದ ಇಂದು ಸಾಯಿ ತೇಜಾ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ತರಲಾಗಿದೆ. ನಾಳೆ ಬೆಳಗ್ಗೆವರೆಗೂ ಇಲ್ಲಿಯೇ ಇರಲಿದೆ. ನಾಳೆ ಬೆಳಗ್ಗೆ ಇಲ್ಲಿಂದ ಅವರ ಸ್ವಗ್ರಾಮವಾದ ಆಂಧ್ರಪ್ರದೇಶದ ಮದನಪಲ್ಲಿಯ ಏಗುವ ರೇಗಡ ಗ್ರಾಮಕ್ಕೆ ಕರೆದೊಯ್ದು, ಪಾರ್ಥಿವ ಶರೀರವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಅಲ್ಲಿ ಸೇನಾ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ಕೇವಲ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ವಿಧಿವಶ!
ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಪತನಗೊಂದು ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಇತರ 11 ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ದೆಹಲಿಯಲ್ಲಿ ನಿನ್ನೆ ಬಿಪಿನ್ ರಾವತ್ ಮತ್ತು ಮಧುಲಿಕಾ ಅವರ ಅಂತ್ಯಕ್ರಿಯೆಯನ್ನು ಸಕಲ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗಿತ್ತು.
ಸಾಯಿ ತೇಜಾ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ
ಕೇವಲ 27 ವರ್ಷದ ಸಾಯಿ ತೇಜಾ ಅವರು ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್ಗೆ ಸೇರಿದ್ದ ಇವರಿಗೆ ಪತ್ನಿ ಹಾಗೂ ಮೂರು ಹಾಗೂ ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆ. ಇವರ ಕುಟುಂಬಕ್ಕೆ ಆಂಧ್ರ ಸರ್ಕಾರ 50 ಲಕ್ಷ ರೂ. ಪರಿಹಾರ ಘೋಷಿಸಿದೆ.