ಬೆಂಗಳೂರು: ಜಯನಗರದಲ್ಲಿ ನಡೆದ ಸಮಾರಂಭದಲ್ಲಿ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಮಲಿಂಗಾರೆಡ್ಡಿ, ಕೆಲ ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿದ್ದಾರೆ. ಅವರನ್ನೆಲ್ಲ ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತೇನೆ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಹೊಂದಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿದ್ದು ಹಲವು ವರ್ಷಗಳ ಕಾಲ ಜನರಿಗೆ ಸೇವೆ ಸಲ್ಲಿಸಿದ್ದೇನೆ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಸಚಿವನಾಗಿ ಕೆಲಸ ಮಾಡಿದ್ದೇನೆ. ಬೆಂಗಳೂರಿನಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತೇನೆ ಎಂದರು.
![i-will-bring-back-the-leaders-who-left-the-party](https://etvbharatimages.akamaized.net/etvbharat/prod-images/kn-bng-04-ramalingareddy-felicitation-script-7208077_24012021194108_2401f_1611497468_277.jpg)
ಪಕ್ಷ ಬಿಟ್ಟು ಹೋದ ಮುಖಂಡರನ್ನು ಸಂಪರ್ಕಿಸಿ ಮರಳಿ ಬರುವಂತೆ ಒತ್ತಾಯಿಸುವ ಕಾರ್ಯ ಮಾಡುತ್ತೇವೆ. ಈ ವಿಚಾರವಾಗಿ ಪಕ್ಷದ ರಾಜ್ಯ ನಾಯಕರು ಹಾಗೂ ರಾಷ್ಟ್ರೀಯ ನಾಯಕರ ಜೊತೆಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಪಕ್ಷ ಸೇರ್ಪಡೆಗೆ ಒಂದು ಸೂಕ್ತ ಮಾನದಂಡ ಮಾಡಿಕೊಂಡು ಅದಕ್ಕಾಗಿಯೇ ಪ್ರತ್ಯೇಕ ಸಮಿತಿ ರಚಿಸಿಕೊಂಡಿದ್ದೇವೆ. ಸಮಿತಿ ನೀಡುವ ವರದಿ ಆಧರಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
![i-will-bring-back-the-leaders-who-left-the-party](https://etvbharatimages.akamaized.net/etvbharat/prod-images/kn-bng-04-ramalingareddy-felicitation-script-7208077_24012021194108_2401f_1611497468_736.jpg)
ಈ ವೇಳೆ ಮಾಜಿ ಸಚಿವ ಹೆಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಪಿ.ಆರ್.ರಮೇಶ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ.ಎಂ.ನಾಗರಾಜ್, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ, ಜಿ.ಕೃಷ್ಣಪ್ಪ ಮತ್ತಿತರರು ಇದ್ದರು.