ಬೆಂಗಳೂರು: ನಾಡಿಗೆಲ್ಲ ಸಂಕ್ರಾಂತಿ ಸಂಭ್ರಮದ ಜೊತೆಗೆ ಸಿಲಿಕಾನ್ ಸಿಟಿಯ ಜನರಿಗಾಗಿ ಎರಡು ದಿನಗಳ ಜಾನಪದ ಜಾತ್ರೆಯನ್ನು ಪದ್ಮನಾಭನಗರದಲ್ಲಿ ಆಯೋಜಿಸಲಾಗಿದ್ದು, ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿದರು.
ವಿ.ಸೋಮಣ್ಣ ಮಾತನಾಡಿ, ಈ ಕಾರ್ಯಕ್ರಮಕ್ಕೆ ಬಂದಿರುವ ಜನರನ್ನು ನೋಡಿದರೆ ಮೈಸೂರು ದಸರಾ ನೆನಪಿಗೆ ಬರುತ್ತಿದೆ. ಪದ್ಮನಾಭ ನಗರ ಕನ್ನಡ ಮತ್ತು ಸಂಸ್ಕೃತಿ, ಸಂಕ್ರಾಂತಿ ಹಬ್ಬದ ನಿಟ್ಟಿನಲ್ಲಿ ಕಲೆ ಬಿಂಬಿಸುತ್ತಿದೆ ಎಂದು ತಿಳಿಸಿದರು.
ಸಚಿವ ಆರ್.ಆಶೋಕ್ ಮಾತನಾಡಿ, ಬೆಂಗಳೂರು ಐಟಿ-ಬಿಟಿಗೆ ಪ್ರಸಿದ್ದಿಯಾಗಿದೆ. ಅದರಂತೆ ಸಾಂಸ್ಕೃತಿಕ ಕಲೆಗಳ ಬೀಡು ಆಗಬೇಕು. ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹುಬ್ಬಳ್ಳಿ, ಧಾರವಾಡ, ಮಂಗಳೂರು...ಹೀಗೆ ಹಲವೆಡೆ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದರು.
ಜಾನಪದ ಜಾತ್ರೆಗೆ ಬಂದಿದ್ದ ಸಾರ್ವಜನಿಕರಿಗೆ ಎಳ್ಳು,ಬೆಲ್ಲ ಹಾಗೂ ಕಬ್ಬು ಉಚಿತವಾಗಿ ನೀಡಲಾಯಿತು. ಪೂಜಾ ಕುಣಿತ, ಸಂಗೀತ ಕಾರ್ಯಕ್ರಮಗಳ, ವಿವಿಧ ಜಾನಪದ ಕುಣಿತಗಳು ನೆರೆದಿದ್ದವರನ್ನು ರಂಜಿಸಿದವು.