ಬೆಂಗಳೂರು: ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿ ಹೋಟೆಲ್ ನಡೆಸಿದ್ದೇವೆ ಸರ್ಕಾರದ ಎಲ್ಲ ನಿಯಮಗಳನ್ನು ಪಾಲನೆ ಮಾಡಿದ್ದೇವೆ. ವಿದ್ಯುತ್ ಬಿಲ್ ಮೊತ್ತಕ್ಕೆ ವಿಧಿಸುವ ಜಿಎಸ್ಟಿಯಲ್ಲಿ ರಿಯಾಯಿತಿ ನೀಡಬೇಕು. ಕೋವಿಡ್ ಸಮಯದಲ್ಲಿ ತೊಂದರೆಯಾದರೂ ಸಹ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ನಗರದ ಹೋಟೆಲ್ ಉದ್ಯಮಿ ರವಿ ಶೆಟ್ಟಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಈ ಬಾರಿಯ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿದ ರವಿ ಶೆಟ್ಟಿ ಅವರು, ಹೋಟೆಲ್ ಬಂದ್ ಮಾಡಬೇಕೆಂದಾಗ, ಕೇವಲ ಪಾರ್ಸೆಲ್ ನಿಯಮ ಜಾರಿಗೆ ತಂದಾಗ ನಾವುಗಳು ಸಹಕರಿಸಿದ್ದೇವೆ ಹೀಗಾಗಿ ಕನಿಷ್ಠ ಪಕ್ಷ ಶೇಕಡಾ 50 ರಷ್ಟು ತೆರಿಗೆ ಕಡಿತಗೊಳಿಸಬೇಕು. ವಿದ್ಯುತ್ ಪ್ರತಿ ಯುನಿಟ್ ಬಿಲ್ ಪಾವತಿಸಲು ತಯಾರಿದ್ದೇವೆ. ಆದರೆ, ಹೆಚ್ಚಿನ ದರ ವಿಧಿಸಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಅಡುಗೆ ಎಣ್ಣೆ ಪದಾರ್ಥಗಳು ಸೇರಿದಂತೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಎಲ್ಲ ಖರ್ಚು ವೆಚ್ಚಗಳನ್ನು ಗ್ರಾಹಕರ ಮೇಲೆ ಹೇರಲಾಗುವುದಿಲ್ಲ ಹೆಚ್ಚಿನ ಹೊರೆಯನ್ನು ಹೋಟೆಲ್ಗಳು ನಿಭಾಯಿಸಬೇಕಾಗುತ್ತದೆ. ಬಾಡಿಗೆಯಲ್ಲಿ ರಿಯಾಯಿತಿ ಸಹ ಈಗ ಕೇಳಲಾಗುವುದಿಲ್ಲ. ನಮಗೂ ಕಷ್ಟವಿದೆ ಎಂದು ಬಿಲ್ಡಿಂಗ್ ಮಾಲೀಕರು ಹೇಳುತ್ತಾರೆ. ಈ ವಿಚಾರದಲ್ಲಿ ಸರ್ಕಾರದಿಂದ ಯಾವ ಮಾರ್ಗಸೂಚಿಯೂ ಇಲ್ಲ ಎಂದು ಅಳಲು ತೋಡಿಕೊಂಡರು.
ಶೇಕಡಾ 20ರಷ್ಟು ಮಾತ್ರ ವ್ಯಾಪಾರ ನಡೆಯುತ್ತಿದೆ: ಎರಡು ವರ್ಷದ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಕೇವಲ ಶೇಕಡ 20ರಷ್ಟು ವ್ಯಾಪಾರವಾಗುತ್ತಿದೆ. ತೆರಿಗೆ ಕಟ್ಟಲು ಕಾಲಾವಕಾಶವನ್ನಾದರೂ ನೀಡಬೇಕು, ಕನಿಷ್ಠ 6 ತಿಂಗಳಾದರೂ ಸಮಯಾವಕಾಶ ಸರಕಾರ ನೀಡಬೇಕು. ವಿದ್ಯುತ್ ದರದಲ್ಲಿ ಯೂನಿಟ್ ಚಾರ್ಜ್ ಕಟ್ಟಲು ತಯಾರಿದ್ದೇವೆ.
ಆದರೆ, ಪ್ರತಿ ತಿಂಗಳು ಫಿಕ್ಸೆಡ್ ಚಾರ್ಜಸ್ ಹೊರೆಯಾಗುತ್ತಿದೆ ಅದನ್ನಾದರೂ ಕಡಿತಗೊಳಿಸಬೇಕು. ಸರ್ಕಾರ ಹೀಗೆ ಮಾಡಿದರೆ ಹೋಟೆಲ್ ಉದ್ಯಮಕ್ಕೆ ಸಹಕಾರಿಯಾಗುತ್ತದೆ ಎಂದು ಈಟಿವಿ ಭಾರತದ ಮೂಲಕ ಮನವಿ ಮಾಡಿದರು.
ಓದಿ : ಶಾರುಖ್ - ದೀಪಿಕಾ ಅಭಿನಯದ ಪಠಾಣ್ ಸಿನೆಮಾದ ಬಿಡುಗಡೆ ದಿನಾಂಕ ಘೋಷಣೆ