ಹೊಸಕೋಟೆ: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದ ಎಂವಿಜೆ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದ ಭಾನುವಾರ ನಗರದ ಎಂವಿಜೆ ಕೋವಿಡ್ ಸೆಂಟರ್ಗೆ ದಾಖಲಾಗಿದ್ದ ಬಿಬಿಎಂಪಿ ಸೋಂಕಿತ ಸಿಬ್ಬಂದಿ, ಬುಧವಾರ ರಾತ್ರಿ ಆಸ್ಪತ್ರೆಯ ಸಿಬ್ಬಂದಿಯ ಜೊತೆ ಮನೆಗೆ ಹೋಗಲು ಬಿಡುವಂತೆ ಜಗಳ ಮಾಡಿಕೊಂಡಿದ್ದ. ನಂತರ ಏಕಾಏಕಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾನೆ.
ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದವನಾಗಿರುವ ಸೋಂಕಿತ ಬೆಂಗಳೂರಲ್ಲಿ ವಾಸವಿದ್ದನಂತೆ. ಪಾಸಿಟಿವ್ ಬಂದ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಎಂವಿಜೆ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಇದೀಗ ಆತ ಎಲ್ಲರಿಗೂ ಚೆಳ್ಳೇಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆ ಮತ್ತು ಆರೋಗ್ಯಾಧಿಕಾರಿಗಳಿಗೆ ಎಂವಿಜೆ ಆಸ್ಪತ್ರೆಯಿಂದ ದೂರು ನೀಡಲಾಗಿದೆ. ದೂರು ಸ್ವೀಕರಿಸಿರುವ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಎಸ್ಕೇಪ್ ಆದವನ ಹುಡುಕಾಟ ನಡೆಸುತ್ತಿದ್ದಾರೆ.
ಆದ್ರೆ ಸೋಂಕಿತ ಪರಾರಿಯಾಗಿರುವ ಹಿನ್ನೆಲೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಹೊಸಕೋಟೆಯಲ್ಲಿ ಸಾಕಷ್ಟು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಸದ್ಯ ಪರಾರಿಯಾದ ಸೋಂಕಿತನಿಂದ ಇನ್ನಷ್ಟು ಭೀತಿ ಜನರಲ್ಲಿ ಎದುರಾಗಿದೆ.
ಎಷ್ಟೋ ಜನಕ್ಕೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಡುತ್ತಿರುವ ಸಮಯದಲ್ಲಿ ಈ ಸೋಂಕಿತ ಸುಸಜ್ಜಿತವಾದ ಆಸ್ಪತ್ರೆಯಿಂದ ಯಾವ ಕಾರಣಕ್ಕೆ ಎಸ್ಕೇಪ್ ಆಗಿದ್ದಾನೆಂಬುವುದು ತಿಳಿದು ಬಂದಿಲ್ಲ.