ಬೆಂಗಳೂರು: ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆದು ಗುಣಮುಖರಾದವರನ್ನೂ ಕೂಡಾ ವಾರ್ಡ್ನೊಳಗೆ ಸೇರಿಸಲು ಹೊಂಗಸಂದ್ರದ ಜನತೆ ಹಿಂದೇಟು ಹಾಕುತ್ತಿದ್ದಾರೆ. ಅವರನ್ನು ಅವರವರ ಊರುಗಳಿಗೆ ಕಳಿಸಿಬಿಡಿ ಎಂದು ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ.
ಇದರಿಂದಾಗಿ ಸೋಂಕಿಲ್ಲದ 185 ಕಾರ್ಮಿಕರು ಹಾಗೂ ಸೋಂಕಿನಿಂದ ಗುಣಮುಖರಾದ 5 ಮಂದಿಯನ್ನು ಅವರವರ ಸ್ಥಳಗಳಿಗೆ ಕಳುಹಿಸಲು ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಅನೇಕ ವಲಸೆ ಕಾರ್ಮಿಕರಿಗೆ ಇರಲು ಇಲ್ಲಿ ಮನೆಯೇ ಇಲ್ಲದಂತಾಗಿದೆ. ಹೊಂಗಸಂದ್ರದ ಜನತೆ ಅವರನ್ನು ತಮ್ಮ ಪ್ರದೇಶದೊಳಗೆ ಬಿಟ್ಟುಕೊಳ್ಳದ ಕಾರಣದಿಂದ ವಲಸೆ ಕಾರ್ಮಿಕರ ಕ್ವಾರಂಟೈನ್ ಮುಗಿದರೂ ಅವರನ್ನು ಬಿಬಿಎಂಪಿ ನೋಡಿಕೊಳ್ಳುತ್ತಿದೆ. ನಿತ್ಯ ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಿಕೊಟ್ಟಿದೆ.
ಸರ್ಕಾರದ ಜೊತೆ ಚರ್ಚಿಸಿ ಕೆಲವೇ ದಿನಗಳಲ್ಲೇ ಅವರನ್ನ ಊರಿಗೆ ಕಳಹಿಸಲಾಗುತ್ತದೆ. ಇವರಲ್ಲಿ ತಮಿಳುನಾಡು, ಬಿಹಾರ, ಒಡಿಶಾ ಮತ್ತು ಕರ್ನಾಟಕ ಬೇರೆ ಬೇರೆ ಕಡೆಯಿಂದ ಬಂದ ತುಂಬಾ ಜನ ಕಾರ್ಮಿಕರು ಇದ್ದಾರೆ. ಉಳಿದವರನ್ನ ಕಳುಹಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.
ಸದ್ಯ ಪೊಲೀಸರು ಆಯಾ ಠಾಣಾ ವ್ಯಾಪ್ತಿಯ ವಲಸೆ ಕಾರ್ಮಿಕರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಹೊಂಗಸಂದ್ರ ಕಾರ್ಮಿಕರಿಗೆ ಸೋಂಕು ಪತ್ತೆಯಾದ ಕಾರಣ ಪ್ರತ್ಯೇಕವಾಗಿ ಅವರನ್ನು ಕಳುಹಿಸುವ ವ್ಯವಸ್ಥೆ ಮಾಡಲು ಚಿಂತನೆ ನಡೆಸಿದ್ದಾರೆ.