ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬಳು ತನ್ನ ಸಹಚರರ ಮೂಲಕ ನಗರದ ಯುವಕನೊಬ್ಬನಿಂದ 5 ಲಕ್ಷ ರೂ. ಸುಲಿಗೆ ಮಾಡಿರುವ ಪ್ರಕರಣ ಆಗ್ನೇಯ ವಿಭಾಗದ ಸೆನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯುವಕ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಯುವಕ ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯ ಜೊತೆ ಪ್ರತಿನಿತ್ಯ ವಾಟ್ಸ್‌ಆ್ಯಪ್‌ನಲ್ಲಿ ಮಾತುಕತೆ ಮಾಡುತ್ತಿದ್ದ. ಆಗಾಗ್ಗೆ ವಿಡಿಯೋ ಕರೆ ಮಾಡುತ್ತಿದ್ದ ಯುವತಿ, ಯುವಕನಿಗೆ ಲೈಂಗಿಕವಾಗಿ ಪ್ರಚೋದಿಸಿ ತಾನೂ ಬೆತ್ತಲಾಗಿ, ಯುವಕನನ್ನು ಬೆತ್ತಲೆ ಮಾಡಿದ್ದಾಳೆ. ಈ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಆಕೆ ಕೆಲವು ದಿನಗಳ ಬಳಿಕ ಯುವಕನಿಗೆ ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಆದರೆ ಯುವಕ ಹಣ ನೀಡಿರಲಿಲ್ಲ.
ಕೆಲವು ದಿನಗಳು ಬಿಟ್ಟು ದೂರುದಾರರಿಗೆ ಕರೆ ಮಾಡಿದ್ದ ಅಪರಿಚಿತರು, ಸಿಬಿಐ ಅಧಿಕಾರಿಯೆಂದು ಹೇಳಿಕೊಂಡಿದ್ದರು. ನಿಮ್ಮ ಹೆಸರು ಬರೆದಿಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಮೊಬೈಲ್‌ನಲ್ಲಿ ನಿಮ್ಮ ನಗ್ನ ವಿಡಿಯೋ ಸಿಕ್ಕಿದೆ. ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯದಲ್ಲೇ ನಿಮ್ಮ ಮನೆ ಮೇಲೆ ದಾಳಿ ಮಾಡುತ್ತೇವೆ ಎಂದು ಹೆದರಿಸಿದ್ದಾರೆ.
ಅಲ್ಲದೇ, 5 ಲಕ್ಷ ರೂಪಾಯಿ ನೀಡಿದರೆ ಪ್ರಕರಣ ಮುಚ್ಚಿಹಾಕುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿ ಅಷ್ಟೂ ಹಣ ಪೀಕಿದ್ದಾರೆ. ನಂತರವೂ ದಾಳಿಯ ಬೆದರಿಕೆ ಹಾಕಿದಾಗ ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಹೇಳಿದರು.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್