ಬೆಂಗಳೂರು: ಹಿಜಾಬ್ ಧರಿಸಿ ಕಾಲೇಜಿಗೆ ಬರದಂತೆ ರಾಜ್ಯದ ಕೆಲ ಶಿಕ್ಷಣ ಸಂಸ್ಥೆಗಳು ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ದಾಖಲಿಸಿರುವ ರಿಟ್ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ಮುಂದುವರಿಸಿದ್ದು, ನಾಳೆಯೂ ವಾದ - ಪ್ರತಿವಾದಗಳು ಮುಂದುವರಿಯಲಿವೆ.
ಹಿಜಾಬ್ ಕುರಿತಂತೆ ಸಲ್ಲಿಕೆಯಾಗಿರುವ 4 ರಿಟ್ ಅರ್ಜಿಗಳು ಹಾಗೂ ಎರಡು ಮಧ್ಯಂತರ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ತ್ರಿಸಸದಸ್ಯ ಪೀಠ ಇಂದು ಕೂಡಾ ವಿಚಾರಣೆ ಮುಂದುವರೆಸಿತು. ಸುಮಾರು 2 ಗಂಟೆಗೂ ಹೆಚ್ಚುಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ನನ್ನ ವಾದವನ್ನು ಮಾಧ್ಯಮಗಳು ವರದಿ ಮಾಡ್ತಿವೆ: ಕಾಮತ್ ಅಸಮಾಧಾನ:
ಕುರಾನ್ ಹಾಗೂ ಹಿಜಾಬ್ ಧರಿಸುವಿಕೆ ಕುರಿತಂತೆ ಇಸ್ಲಾಂ ಧರ್ಮದ ಮೂಲಗಳನ್ನು ವಿವರಿಸಲು ಆರಂಭಿಸಿದ ಕಾಮತ್ ನಾನು ವಾದಿಸುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡಬಾರದು. ಕೆಲವರು ಇದನ್ನೇ ವಿವಾದ ಮಾಡುತ್ತಿದ್ದಾರೆ. ಏಕೆಂದರೆ ನಾನೊಬ್ಬ ಹಿಂದೂ. ಆದರೆ, ನನ್ನ ಕೆಲಸವನ್ನಷ್ಟೇ ನಾನು ಮಾಡುತ್ತಿದ್ದೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನೀವಿಲ್ಲಿ ಮೊದಲಿಗೆ ವಕೀಲರು ಎಂದಿತು.
ಎಲ್ಲರೂ ಒಪ್ಪಿದರೆ ಯೂಟ್ಯೂಬ್ ನೇರಪ್ರಸಾರ ನಿಲ್ಲಿಸಲು ಪರಿಶೀಲಿಸಬಹುದು:
ಅರ್ಜಿದಾರರೊಬ್ಬರ ಪರ ವಾದಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಕಲಾಪ ವರದಿಯಾಗುತ್ತಿದೆ. ಇದರಿಂದ ಬೇರೆ ರಾಜ್ಯಗಳ ಚುನಾವಣೆ ಮೇಲೆ ಪ್ರಭಾವ ಸಾಧ್ಯತೆ ಇದೆ ಎನ್ನಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಎಲ್ಲರೂ ಒಪ್ಪಿದರೆ ಯೂಟ್ಯೂಬ್ ನೇರಪ್ರಸಾರ ನಿಲ್ಲಿಸಲು ಪರಿಶೀಲಿಸಬಹುದು ಎಂದು ಅಭಿಪ್ರಾಯಪಟ್ಟಿತು.
ಜವಾಬ್ದಾರಿಯಿಂದ ನಡೆದುಕೊಳ್ಳುವಂತೆ ಮಾಧ್ಯಮಗಳಿಗೆ ಸಿಜೆ ಮನವಿ
ವಿಚಾರಣೆ ಆರಂಭಕ್ಕೂ ಮುನ್ನ ಮಾಧ್ಯಮಗಳಿಗೆ ಮನವಿ ಮಾಡಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ರಾಜ್ಯದಲ್ಲಿ ಶಾಂತಿ - ಸುವ್ಯವಸ್ಥೆ ನೆಲೆಸಬೇಕು, ನಾವೆಲ್ಲರೂ ಈ ಜವಾಬ್ದಾರಿ ನಿರ್ವಹಿಸಬೇಕು. ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೇ ಗುರುತಿಸುತ್ತೇವೆ. ಹೀಗಾಗಿ, ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಯಾವುದೇ ನಿರ್ದೇಶನ ನೀಡುತ್ತಿಲ್ಲ, ಆದರೂ ಮಾಧ್ಯಮಗಳು ಜವಾಬ್ದಾರಿಯಿಂದ ನಡೆದುಕೊಳ್ಳುವಂತೆ ಕೋರುತ್ತೇವೆ ಎಂದರು.
ಇದನ್ನು ಓದಿ:ಬೇಗ ಕ್ಲಾಸ್ ಶುರು ಮಾಡಿ.. ವಿದ್ಯಾರ್ಥಿನಿ ಆಗ್ರಹ: ಮಕ್ಕಳ ಬದುಕು ಮುಖ್ಯ ಎಂದರು ಪೇಜಾವರ ಶ್ರೀ