ಬೆಂಗಳೂರು: ಕೊಡಗು ಜಿಲ್ಲೆಯ ಪ್ರಸಿದ್ಧ ಮಡಿಕೇರಿಯ ಕೋಟೆ ಮತ್ತು ಅರಮನೆ ಕಟ್ಟಡದ ನವೀಕರಣ ಕಾಮಗಾರಿಯನ್ನು ಮಳೆಯ ಕಾರಣದಿಂದ ಸ್ಥಗಿತಗೊಳಿಸಿದ ಭಾರತೀಯ ಪುರಾತತ್ವ ಇಲಾಖೆ ಕ್ರಮದ ಬಗ್ಗೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ.
ಆಲೂರು ಸಿದ್ದಾಪುರ ಗ್ರಾಮದ ನಿವಾಸಿ ಜೆ.ಎಸ್. ವಿರೂಪಾಕ್ಷಯ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಶಿಥಿಲಾವಸ್ಥೆಯಲ್ಲಿರುವ ಮಡಿಕೇರಿ ಕೋಟೆ ಹಾಗೂ ಅರಮನೆ ಕಟ್ಟಡವನ್ನು ಸಂರಕ್ಷಿಸಿ ನವೀಕರಣಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದರು.
ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆಗೆ ನಡೆಸಿದಾಗ, ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕರು ಪ್ರಮಾಣ ಪತ್ರ ಸಲ್ಲಿಸಿ, ಮುಂಗಾರುನಿಂದಾಗಿ ಅರಮನೆಯಲ್ಲಿ ನೀರು ಸೋರಿಕೆ ಭಾಗಗಳ ರಿಪೇರಿ ಕಾರ್ಯವನ್ನು ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ, ರಿಪೇರಿ ಕಾರ್ಯವನ್ನು ನಿಲ್ಲಿಸಲಾಗಿದ್ದು, ನೀರು ಸೋರುವ ಭಾಗಗಳನ್ನು ಟಾರ್ಪಲಿನ್‌ಯಿಂದ ಮುಚ್ಚಲಾಗಿದೆ. ನೀರು ಸೋರಿಕೆಯಿಂದ ಅರಮನೆಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಮಡಿಕೇರಿ ಕೋಟೆ ದುರಸ್ತಿ : IASDಗೆ ಸೇವಾಶುಲ್ಕ ವಿಧಿಸುವ ಅಧಿಕಾರವಿಲ್ಲ ಎಂದ ಹೈಕೋರ್ಟ್
ಈ ಉತ್ತರದಿಂದ ಅಸಮಾಧಾನಗೊಂಡ ನ್ಯಾಯಾಲಯ, ಅರಮನೆ ನವೀಕರಣ ಕಾರ್ಯ ಸಂಬಂಧ 2021ರ ಜುಲೈ 28ರಂದು ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ನೀರು ಸೋರುವ ಭಾಗಗಳ ರಿಪೇರಿ ಕಾರ್ಯ ಆರಂಭಿಸಲಾಗಿದೆ ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಆದರೆ, ಆ.10ರಂದು ಮುಂಗಾರು ಕಾರಣದಿಂದ ದಿಢೀರ್ ಆಗಿ ರಿಪೇರಿ ಕಾರ್ಯ ನಿಲ್ಲಿಸಲಾಗಿದೆ. ಜುಲೈ28ರಂದು ಪ್ರಮಾಣ ಪತ್ರ ಸಲ್ಲಿಸುವಾಗ ಮುಂಗಾರು ಬಗ್ಗೆ ಅಧಿಕಾರಿಗೆ ಮಾಹಿತಿ ಇರಲಿಲ್ಲವೇ? ಈ ಕಾರ್ಯವೈಖರಿ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿತು.
ಮಳೆಯ ಕಾರಣದಿಂದ ರಿಪೇರಿ ಕೆಲಸ ಮಾಡಲು ಆಗುವುದಿಲ್ಲ ಎನ್ನುವುದನ್ನು ತಿಳಿಸುವ ಮುನ್ನ ಭಾರತೀಯ ಪುರಾತತ್ವ ಇಲಾಖೆ ತಂಡದಲ್ಲಿ ಕಟ್ಟಡ ಎಂಜಿನಿಯರ್ ಇದ್ದಾರೆಯೇ? ಇಲ್ಲವೇ ಹಿರಿಯ ಕಟ್ಟಡ ಎಂಜಿನಿಯರ್ ಅವರೊಂದಿಗೆ ಸಮಾಲೋಚನೆ ಮಾಡಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆಯೇ? ಎಂಬುದನ್ನು ಸ್ಪಷ್ಟಪಡಿಸಿ ಸೆ.3ರೊಳಗೆ ಇಲಾಖೆಯ ಅಧೀಕ್ಷಕರು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ. ನವೀಕರಣಕ್ಕೆ ಸಂಬಂಧಿಸಿದ ಬೃಹತ್ ಕಾರ್ಯಗಳ ಟೆಂಡರ್ ಕರೆದಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ. ಹೀಗಾಗಿ, ಟೆಂಡರ್ ಪ್ರಕ್ರಿಯೆಯ ಪ್ರಗತಿ ವರದಿ ಸಲ್ಲಿಸುವಂತೆ ಅಧೀಕ್ಷಕರಿಗೆ ಸೂಚಿಸಿ ವಿಚಾರಣೆಯನ್ನು ಸೆ.7ಕ್ಕೆ ಹೈಕೋರ್ಟ್ ಮುಂದೂಡಿತು.