ಬೆಂಗಳೂರು: ನಗರದಲ್ಲಿ ಆಗಾಗ್ಗೆ ನಡೆಯುವ ಪ್ರತಿಭಟನೆ, ಧರಣಿ ಹಾಗೂ ರ‍್ಯಾಲಿಗಳಿಂದ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.
ನಗರದಲ್ಲಿ ನಡೆಸುವ ಪ್ರತಿಭಟನೆಗಳ ಪರಿಣಾಮ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಬರೆದಿದ್ದ ಪತ್ರವನ್ನು ಆಧರಿಸಿ, ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಲು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯಪೀಠ ತನ್ನ ರಿಜಿಸ್ಟ್ರಾರ್ಗೆ ಆದೇಶಿಸಿದೆ. ಹಾಗೆಯೇ, ಅರ್ಜಿಯಲ್ಲಿ ಸರ್ಕಾರ, ನಗರ ಪೊಲೀಸ್ ಆಯುಕ್ತ, ಬಿಬಿಎಂಪಿ ಆಯುಕ್ತ ಮತ್ತು ಎಲ್ಲ ಪ್ರಮುಖ ರಾಜಕೀಯ ಪಕ್ಷಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ, ನೋಟಿಸ್ ಜಾರಿ ಮಾಡುವಂತೆ ನಿರ್ದೇಶಿಸಿದೆ.
ಇದೇ ವೇಳೆ, ಪ್ರತಿಭಟನೆಗಳು ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಪೀಠ, ಸಂವಿಧಾನದಡಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಮೂಲ ಹಕ್ಕಿದೆ. ಸುಪ್ರೀಂಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿದೆ. ಹಾಗೆಂದು ಇದನ್ನೇ ಮುಂದಿಟ್ಟುಕೊಂಡು ಬೇರೆ ಜನರ ಹಕ್ಕುಗಳನ್ನು ಮೊಟಕುಗೊಳಿಸಬಾರದು ಎಂದಿದೆ.
ಬೆಂಗಳೂರು ನಗರ ವಾಸಿಸಲು ತುಂಬಾ ಯೋಗ್ಯ ನಗರ ಎಂಬ ಮಾಧ್ಯಮಗಳ ವರದಿ ಉಲ್ಲೇಖಿಸಿರುವ ಪೀಠ, ಉತ್ತಮ ನಗರ ಎಂಬದನ್ನು ಒಪ್ಪೋಣ. ಆದರೆ, ನಿತ್ಯ ಬೆಳಗ್ಗೆ ಮತ್ತು ಸಂಜೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಾವು ಪರಿಗಣಿಸಬೇಕಿದೆ ಎಂದಿದೆ.
ಪ್ರಕರಣದ ಹಿನ್ನೆಲೆ: ನ್ಯಾ. ಅರವಿಂದ್ ಕುಮಾರ್ ಮಾ.2ರಂದು ನಗರದಲ್ಲಿ ನಡೆದ ವಿವಿಧ ಪ್ರತಿಭಟನೆಗಳ ಪರಿಣಾಮ ವಾಹನ ದಟ್ಟಣೆ ಉಂಟಾಗಿ ಜನರು ಹೈರಾಣಾಗಿದ್ದರ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿಯನ್ನು ಉಲ್ಲೇಖಿಸಿ, ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದರು. ಪದೇ- ಪದೆ ನಡೆಯುತ್ತಿರುವ ಪ್ರತಿಭಟನೆಗಳು, ಧರಣಿ ಮತ್ತು ರ‍್ಯಾಲಿಗಳಿಂದಾಗಿ ಜನರಿಗೆ ತೀವ್ರ ತೊಂದರೆ ಆಗುತ್ತಿದೆ. ಈ ಬಗ್ಗೆ ಗಮನಹರಿಸಿ, ಸೂಕ್ತವೆನ್ನಿಸಿದರೆ ಈ ಪ್ರತ್ರವನ್ನೇ ಆಧರಿಸಿ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದರು.
ಓದಿ: ’ತೇಜೋವಧೆ ಆಗೋ ಸಾಧ್ಯತೆ ಇರೋದರಿಂದ ಕೋರ್ಟ್ ಮೊರೆ ಹೋಗಿದ್ದಾರೆ’: ಸಚಿವ ಬೊಮ್ಮಾಯಿ
ಮಾ.2ರಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾರಿಗೆ ಸಂಸ್ಥೆ ನೌಕರರು ತಮ್ಮ ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಆ ವೇಳೆ, ಉಂಟಾದ ವಾಹನ ದಟ್ಟಣೆಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಈ ಕುರಿತು ಮಾಧ್ಯಮಗಳು ಪ್ರಕಟಿಸಿದ್ದ ವರದಿಗಳ ಬಗ್ಗೆ ನ್ಯಾ.ಅರವಿಂದ್ ಕುಮಾರ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.