ಬೆಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಕಾ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ವಿಶೇಷ ಸರ್ಕಾರಿ ಅಭಿಯೋಜಕರಾಗಿ ವಕೀಲ ರವೀಂದ್ರನಾಥ ಕಾಮತ್ ಅವರನ್ನು ನೇಮಿಸಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಎಸ್‌ಪಿಪಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ನೇತೃತ್ವದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ನ್ಯಾಯಾಲಯಗಳಲ್ಲಿ ದೂರುದಾರರ ಪರವಾಗಿ ಮತ್ತು ಮೃತ ಕುಟುಂಬದವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳಲ್ಲಿ ರವೀಂದ್ರನಾಥ್ ಕಾಮತ್ ವಾದ ಮಂಡಿಸಿದ್ದಾರೆ. ಕೊಲೆಯ ನಂತರ ನಡೆದ ಹಲವು ಪ್ರತಿಭಟನೆಗಳಲ್ಲಿ ಅವರು ಭಾಗವಹಿಸಿದ್ದರು. ಮೃತರ ತಂದೆ ನಡೆಸಿದ ಸುದ್ದಿಗೋಷ್ಠಿಯಲ್ಲೂ ಪಾಲ್ಗೊಂಡು ನನ್ನ ವಿರುದ್ಧ ಹೇಳಿಕೆ ನೀಡಿದ್ದರು. ಮೃತನ ಕುಟುಂಬದವರ ಮನವಿ ಮೇರೆಗೆ ರವೀಂದ್ರನಾಥ್ ಅವರನ್ನೇ ಎಸ್‌ಪಿಪಿಯಾಗಿ ನೇಮಿಸಲಾಗಿದೆ. ಹೀಗಾಗಿ, ಕಾಮತ್ ಎಸ್‌ಪಿಪಿಯಾಗಿ ಮುಂದುವರಿದರೆ ನಿಷ್ಪಕ್ಷಪಾತ ವಿಚಾರಣೆ ಸಾಧ್ಯವಿಲ್ಲ. ಆದ್ದರಿಂದ, ಅವರ ನೇಮಕಾತಿ ರದ್ದುಪಡಿಸಬೇಕು ಆರೋಪಿ ನರೇಶ್ ಶೆಣೈ ಕೋರಿದ್ದರು.
ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನವೇನು?
ಈ ಮನವಿ ಪರಿಗಣಿಸಿದ ಪೀಠ ಎಸ್‌ಪಿಪಿ ನೇಮಕ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ. ಇದೇ ವೇಳೆ ಹೊಸದಾಗಿ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಲು ಬಾಳಿಗಾ ಸಹೋದರಿ ಅನುರಾಧಾ ಬಾಳಿಗಾ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಕ್ತ ಅವಕಾಶ ಹೊಂದಿದ್ದಾರೆ. ಒಂದೊಮ್ಮೆ ಬಾಳಿಗಾ ಸಹೋದರಿ ಅನುರಾಧಾ ಮನವಿ ಸಲ್ಲಿಸಿದರೆ, ಅರ್ಜಿಯನ್ನು ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ.
ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು 2016ರ ಮಾರ್ಚ್ 21ರ ಬೆಳಗಿನ ಜಾವ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ರವೀಂದ್ರನಾಥ್ ಕಾಮತ್ ಅವರನ್ನು ನೇಮಿಸಿ 2016ರ ಡಿಸೆಂಬರ್ 21ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.