ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಸಂಬಂಧ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಯುವತಿ ಪರ ವಕೀಲರ ಅನಾರೋಗ್ಯದ ಹಿನ್ನೆಲೆ ಹೈಕೋರ್ಟ್ ಸೆ.17ಕ್ಕೆ ಮುಂದೂಡಿದೆ.
ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ಪ್ರಶ್ನಿಸಿ ವಕೀಲೆ ಗೀತಾ ಮಿಶ್ರಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸೆ.17ಕ್ಕೆ ವಿಚಾರಣೆ :
ವಾದ ಮಂಡನೆ ವೇಳೆ ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಪದೇ ಪದೆ ಕೆಮ್ಮುತ್ತಿದ್ದದ್ದನ್ನು ಗಮನಿಸಿದ ಪೀಠ, ನಿಮಗೆ ಹುಷಾರಿಲ್ಲವೇ? ಬೇಕಾದರೆ ಅರ್ಜಿ ವಿಚಾರಣೆ ಮತ್ತೊಂದು ದಿನಕ್ಕೆ ಮುಂದೂಡೋಣ ಎಂದು ಇಂದಿರಾ ಜೈಸಿಂಗ್ ಅವರನ್ನು ಕೇಳಿತು. ಇಂದಿರಾ ಜೈಸಿಂಗ್ ಅವರು, ಸ್ವಲ್ಪ ಮಟ್ಟಿಗೆ ಆರೋಗ್ಯದ ಸಮಸ್ಯೆಯಿದ್ದು ಒಂದು ದಿನ ವಿಚಾರಣೆ ಮುಂದೂಡಿದರೆ ಉತ್ತಮ ಎಂದು ತಿಳಿಸಿದರು. ಹಾಗಾಗಿ, ಪೀಠವು ಅರ್ಜಿ ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರೆ ಗೀತಾ ಮಿಶ್ರಾ ಪರ ವಕೀಲ ಜಿ.ಆರ್. ಮೋಹನ್ ವಾದಿಸಿ, ರಮೇಶ್ ಜಾರಕಿಹೊಳಿ ಪ್ರಕರಣ ಸಂಬಂಧ ಮಾ. 2ರಂದು ದಿನೇಶ್ ಕಲ್ಲಳ್ಳಿ ದೂರು ದಾಖಲಿಸಿದ ನಂತರದ ಬೆಳವಣಿಗೆಗಳ ಬಗ್ಗೆ ಪೀಠಕ್ಕೆ ವಿವರಿಸಿದರು. ಜೊತೆಗೆ ಕಬ್ಬನ್ ಪಾರ್ಕ್ ಮತ್ತು ಸದಾಶಿವ ಠಾಣಾ ಪೊಲೀಸರಿಗೆ ಮಾತ್ರ ಪ್ರಕರಣದ ತನಿಖೆ ನಡೆಸುವ ಅಧಿಕಾರವಿದೆ. ಎಸ್‌ಐಟಿಗೆ ತನಿಖೆ ಮೇಲ್ವಿಚಾರಣೆ ನಡೆಸುವ ಅಧಿಕಾರವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಪುಟ್ಬಾಲ್ ಸ್ಟೇಡಿಯಂನಲ್ಲಿ ರೌಡಿಶೀಟರ್ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಇಂದಿರಾ ಜೈಸಿಂಗ್ ಅವರು, ಹಿಂದಿನ ಗೃಹ ಸಚಿವರು ಪತ್ರ ಬರೆದು ನಿರ್ದೇಶಿಸಿದ ಹಿನ್ನೆಲೆ ನಗರ ಪೊಲೀಸ್ ಆಯುಕ್ತರು ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದರು. ಎಸ್‌ಐಟಿ ರಚಿಸುವಂತೆ ನಿರ್ದೇಶಿಸುವ ಅಧಿಕಾರ ಗೃಹ ಸಚಿವರಿಗೆ ಇಲ್ಲ ಎಂದು ಪೀಠದ ಗಮನಕ್ಕೆ ತಂದರು.