ಬೆಂಗಳೂರು : ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರ ಆಯ್ಕೆ ಅಸಿಂಧು ಕೋರಿ ಸಲ್ಲಿಸಿರುವ ಅರ್ಜಿ ಮರು ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್, ಈ ಸಂಬಂಧ ಜಾರಿ ಮಾಡಿದ್ದ ನೋಟಿಸ್ ಸ್ವೀಕರಿಸಲು ಪ್ರಕರಣದ ಐದನೇ ಪ್ರತಿವಾದಿ ಆರ್.ಜಿ ಸತೀಶ್ (ಕಣದಲ್ಲಿದ್ದ ಪರಾಜಿತ ಅಭ್ಯರ್ಥಿ) ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿವಾದಿ ಸತೀಶ್ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಹೈಕೋರ್ಟ್ ಹಾಸನ ಪೊಲೀಸರಿಗೆ ನಿರ್ದೇಶಿಸಿದೆ.
ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಚುನಾಯಿತಗೊಂಡಿರುವ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಎ. ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ಮರು ವಿಚಾರಣೆಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ಧ ಪೀಠ ನಡೆಸಿತು.
ಇದನ್ನೂ ಓದಿ: ಕೋರ್ಟ್ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಲು ಹೈಕೋರ್ಟ್ ಸುತ್ತೋಲೆ
ವಿಚಾರಣೆ ವೇಳೆ ಎ. ಮಂಜು ಪರ ವಕೀಲ ಎಂ.ಆರ್ ವಿಜಯಕುಮಾರ್ ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿ, ಪ್ರಕರಣದ 5ನೇ ಪ್ರತಿವಾದಿ ಆರ್.ಜಿ ಸತೀಶ್ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದರು. ಇದನ್ನು ಪರಿಶೀಲಿಸಿದ ಪೀಠ, ಪೊಲೀಸರ ಮುಖಾಂತರ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿತು.