ಬೆಂಗಳೂರು: ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಗುಂಡೇಹಳ್ಳಿಯಲ್ಲಿ 36 ಎಕರೆ ಗೋಮಾಳ ಜಮೀನಿನಲ್ಲಿ 9ಸಾವಿರ ಗಿಡಗಳನ್ನು ಅಕ್ರಮ ಗಣಿಗಾರಿಕೆಗೆ ನಾಶಪಡಿಸಿದ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿ ಹೈಕೋರ್ಟ್ ಆದೇಶಿಸಿದೆ.
ಮಾಲೂರು ನಿವಾಸಿಗಳಾದ ರವೀಂದ್ರ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಸತೀಶ್ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ಆದೇಶದಲ್ಲಿ, ಅರಣ್ಯ ಇಲಾಖೆಯು ಸರ್ಕಾರದ ಹಣದಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಗುಂಡೇಹಳ್ಳಿಯ ಸರ್ವೇ ನಂಬರ್ 66ರಲ್ಲಿನ 36 ಎಕರೆ 2 ಗುಂಟೆ ಗೋಮಾಳ ಜಮೀನಿನಲ್ಲಿ 1995ರಲ್ಲಿ ಒಟ್ಟು 9,500 ಗಿಡಗಳನ್ನು ನೆಟ್ಟಿತ್ತು. ನಂತರ ನಿರ್ವಹಣೆಗಾಗಿ ಬನಹಳ್ಳಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿತ್ತು. ಆದರೆ, ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಎಲ್ಲ ಗಿಡಗಳನ್ನು ನಾಶಪಡಿಸಲಾಗಿದೆ. ಇದರಲ್ಲಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಆ ಜಾಗಕ್ಕೂ ಪಂಚಾಯಿತಿಗೂ ಸಂಬಂಧವಿಲ್ಲ ಎಂದು ಪ್ರಮಾಣ ಪತ್ರ
ಆದರೆ, ಬನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ, ಅರಣ್ಯ ಪ್ರದೇಶವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿಲ್ಲ. ಆ ಜಾಗಕ್ಕೂ ಗ್ರಾಮ ಪಂಚಾಯ್ತಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಇದೇ ವೇಳೆ, ಸರ್ಕಾರ ವ್ಯತಿರಿಕ್ತ ಹೇಳಿಕೆ ದಾಖಲಿಸಿದ್ದು, ಜಾಗದ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ್ದು, ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಂಡಿದ್ದಾಗಿ ತಿಳಿಸಿದೆ. ಆದ್ದರಿಂದ ಈ ಕುರಿತು ಲೋಕಾಯುಕ್ತ ತನಿಖೆ ಆದೇಶಿಸುವುದು ಸೂಕ್ತ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ
ಅಲ್ಲದೇ, ಪ್ರಕರಣ ಕುರಿತು ಲೋಕಾಯುಕ್ತ ಸಂಸ್ಥೆಯು ತನಿಖೆ ನಡೆಸಬೇಕು ಹಾಗೂ ತನಿಖೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಈ ಜಾಗದಲ್ಲಿ ಅರಣ್ಯ ಇಲಾಖೆಯು ಮತ್ತೆ ಆರು ತಿಂಗಳ ಒಳಗೆ ಗಿಡಗಳನ್ನು ನೆಡಬೇಕು. ಅಕ್ರಮ ಗಣಿಗಾರಿಕೆಯಿಂದ ಮತ್ತೆ ಗಿಡಗಳನ್ನು ನಾಶವಾಗದಂತೆ ನೋಡಿಕೊಳ್ಳಬೇಕು ಎಂದು ಪೀಠ ನಿರ್ದೇಶಿಸಿದೆ.
ಅಲ್ಲದೆ, ಕೋಲಾರ ಜಿಲ್ಲೆಯ ಅರಣ್ಯ ಉಪ ಸಂರಕ್ಷಣಾಧಿಕಾರಿ ವೆಂಕಟೇಶ್ ಅವರು ಖುದ್ದಾಗಿ ಗಿಡಗಳನ್ನು ನೆಡುವ ಕಾರ್ಯದ ಮೇಲ್ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು. ಅದಕ್ಕಾಗಿ ಆರು ತಿಂಗಳ ಕಾಲ ವೆಂಕಟೇಶ್ ಅವರನ್ನು ಹಾಲಿ ಹುದ್ದೆಯಿಂದ ವರ್ಗಾವಣೆ ಮಾಡಬಾರದು ಎಂದು ಸರ್ಕಾರಕ್ಕೆ ಆದೇಶಿಸಿದೆ.
ಇದನ್ನೂ ಓದಿ: ರೋಬೋಕಾಲ್ ಹಗರಣ: 22 ವರ್ಷ ಜೈಲುಶಿಕ್ಷೆಗೆ ಗುರಿಯಾದ ಭಾರತೀಯ