ಬೆಂಗಳೂರು: ಅರಣ್ಯ ಪ್ರದೇಶ ಸಮೀಪದ ಕೃಷಿ ಭೂಮಿಗಳ ಸುತ್ತ ಬೆಳೆ ಸಂರಕ್ಷಣೆಗೆ ತಂತಿ ಬೇಲಿ ಅಳವಡಿಸಿದ್ದಲ್ಲಿ, ಅರಣ್ಯ ಮತ್ತು ವಿದ್ಯುತ್ ಇಲಾಖೆಯ ಅಧಿಕಾರಿಗಳು ಆಗಾಗ ಜಮೀನಿಗೆ ಭೇಟಿ ನೀಡಿ ತಂತಿ ಬೇಲಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವ ಮೂಲಕ ವಿದ್ಯುತ್ ಸ್ಪರ್ಶದಿಂದ ವನ್ಯಜೀವಿಗಳು ಸಾವಿಗೀಡಾಗುವುದನ್ನು ತಪ್ಪಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಮೈಸೂರಿನ ಎಚ್.ಡಿ.ಕೋಟೆಯ ಮಲಿಯೂರ್ ಅರಣ್ಯ ವ್ಯಾಪ್ತಿಯಲ್ಲಿ ಕೃಷಿ ಜಮೀನಿನ ಸುತ್ತಲಿನ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರಿಂದ ಆಹಾರ ಅರಸಿ ಬಂದ ಹೆಣ್ಣಾನೆಯೊಂದು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಪ್ರಕರಣ ಸಂಬಂಧ ನೀಡಿದ ತೀರ್ಪಿನಲ್ಲಿ ಹೈಕೋರ್ಟ್ ಈ ಸೂಚನೆ ನೀಡಿದೆ.
ಬೆಳೆಯನ್ನು ವನ್ಯಜೀವಿಗಳಿಂದ ರಕ್ಷಣೆ ಮಾಡಲು ರೈತರು ಜಮೀನಿಗೆ ತಂತಿ ಬೇಲಿ ಅಳವಡಿಸುವುದು ಸಾಮಾನ್ಯ.ಇಂತಹ ಸಂದರ್ಭದಲ್ಲಿ ರೈತರು ಬೇಲಿಗೆ ವಿದ್ಯುತ್ ಸಂಪರ್ಕವೇನಾದರೂ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಅರಣ್ಯ ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳು ಜಮೀನಿಗೆ ಪದೇ ಪದೇ ಭೇಟಿ ನೀಡಬೇಕು. ಅನಧಿಕೃತವಾಗಿ ತಂತಿಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೆ ತೆರವುಗೊಳಿಸುವ ಮೂಲಕ ವನ್ಯಜೀವಿಗಳ ಪ್ರಾಣ ಕಾಪಾಡಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: 2007ರಲ್ಲಿ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಮಲಿಯೂರ್ ಅರಣ್ಯ ವಲಯ ವ್ಯಾಪ್ತಿಯ ರಾಜು ಎಂಬುವರ ಜಮೀನಿನಲ್ಲಿ ಹೆಣ್ಣಾನೆಯೊಂದು ಸತ್ತು ಬಿದ್ದಿತ್ತು. ಬೆಳೆದಿದ್ದ ರಾಗಿ ರಕ್ಷಿಸಲು ರಾಜು ತಮ್ಮ ಜಮೀನು ಸುತ್ತಲೂ ಮರದ ಕಂಬಗಳನ್ನು ನೆಟ್ಟು ತಂತಿಬೇಲಿ ಅಳವಡಿಸಿ, ರಾತ್ರಿ ವೇಳೆಯಲ್ಲಿ ತಂತಿಬೇಲಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು.
ಆಹಾರ ಅರಸಿ ಬಂದ ಆನೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ ಆರೋಪದಡಿ ರಾಜು ವಿರುದ್ಧ ದೂರು ದಾಖಲಿಸಿದ್ದ ಸರಗೂರು ಠಾಣಾ ಪೊಲೀಸರು, ದೋಷಾರೋಪ ಸಲ್ಲಿಸುವ ವೇಳೆ ರಾಜುವನ್ನು ಪ್ರಕರಣದಿಂದ ಕೈಬಿಟ್ಟು ಪಕ್ಕದ ಜಮೀನಿನ ಮಾಲೀಕ ಪ್ರಭ ಎಂಬುವವರನ್ನು ಆರೋಪಿ ಮಾಡಿದ್ದರು.
ರಾಜು ಜಮೀನಿಗೆ ಹತ್ತಿರದಲ್ಲಿ ಪ್ರಭ ಎಂಬುವರು ಜಮೀನು ಮತ್ತು ಮನೆ ಇದ್ದು, ಅಲ್ಲಿನ ಸ್ವಿಚ್ ಬೋರ್ಡ್‌ನಿಂದ ಜಮೀನು ಸುತ್ತ ಅಳವಡಿಸಿದ್ದ ತಂತಿಬೇಲಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು ಎಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಮೈಸೂರಿನ ಸೆಷನ್ಸ್ ನ್ಯಾಯಾಲಯ ಪ್ರಭಗೆ ಶಿಕ್ಷೆ ವಿಧಿಸಿತ್ತು. ಈ ಆದೇಶ ರದ್ದು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯನ್ನು ಖುಲಾಸೆಗೊಳಿಸಿ, ಅಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿದೆ.
ಇದನ್ನೂ ಓದಿ: ಪರಸ್ಪರ ಕಾಲೆಳೆದುಕೊಂಡ ಕಾಂಗ್ರೆಸ್- ಬಿಜೆಪಿ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ನೀಡಿದ ಸಲಹೆ ಏನು?