ಬೆಂಗಳೂರು: ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳಲ್ಲಿ ಸಮರ್ಥವಾಗಿ ವಾದ ಮಂಡಿಸಬಲ್ಲ ಸರ್ಕಾರಿ ಅಭಿಯೋಜಕರನ್ನು ಆಯ್ಕೆ ಮಾಡುವ ಸ್ಕ್ರೀನಿಂಗ್ ಸಮಿತಿಯಲ್ಲಿ ರಾಜ್ಯ ಅಡ್ವೊಕೇಟ್ ಜನರಲ್ ಅವರನ್ನು ಸೇರಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಕ್ಷಿಪ್ರ ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರ ಸಲ್ಲಿಸಿದ್ದ ವರದಿ ಪರಿಶೀಲಿಸಿದ ಪೀಠ, ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳಲ್ಲಿ ಸಮರ್ಥ ವಾದ ಮಂಡಿಸಲು ದಕ್ಷ ವಕೀಲರನ್ನು ಆಯ್ಕೆ ಮಾಡಲು ಸರ್ಕಾರ ಜನವರಿ 8ರಂದು ಪರಿಶೀಲನಾ ಸಮಿತಿ ರಚಿಸಿದೆ. ಆದರೆ, ಈ ಸಮಿತಿಯು ಅಡ್ವೊಕೇಟ್ ಜನರಲ್ ಅವರನ್ನೂ ಒಳಗೊಂಡಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಆದೇಶವನ್ನು ಅಗತ್ಯ ಮಾರ್ಪಾಟು ಮಾಡಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 2ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಆಕ್ಷೇಪಿಸಿ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಶಾಸಕರು ಹಾಗೂ ಸಂಸದರ ವಿರುದ್ಧ ದಾಖಲಾಗಿರುವ ಅರ್ಜಿಗಳ ಕ್ಷಿಪ್ರ ವಿಚಾರಣೆ ನಡೆಸಲು ಪೂರಕವಾಗಿ ಹೈಕೋರ್ಟ್ಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅದರಂತೆ ಹೈಕೋರ್ಟ್ ಈ ಸಂಬಂಧ ಸ್ವಯಂ ಪ್ರೇರಿತ ಪಿಐಎಲ್ ಅರ್ಜಿ ದಾಖಲಿಸಿಕೊಂಡಿತ್ತು.
ಅದರಂತೆ ಅರ್ಜಿ ವಿಚಾರಣೆ ನಡೆಸಲಾಗುತ್ತಿದ್ದು, ಹೈಕೋರ್ಟ್ ಹಿಂದಿನ ವಿಚಾರಣೆ ವೇಳೆ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಲ್ಲಿ ವಾದ ಮಂಡಿಸಲು ಸಮರ್ಥ ವಕೀಲರನ್ನು ನಿಯೋಜಿಸಬೇಕು. ಪ್ರಾಸಿಕ್ಯೂಷನ್ ಪರ ವಾದಿಸಲು ಹೆಚ್ಚು ದಕ್ಷ ಮತ್ತು ಪ್ರಮಾಣಿಕ ವಕೀಲರನ್ನು ಪಿಪಿಗಳಾಗಿ ಆಯ್ಕೆ ಮಾಡಬೇಕು. ಇವರ ಆಯ್ಕೆಗೆ ವಿಶೇಷ ನಿಯಮಗಳನ್ನು ಅನುಸರಿಸಬೇಕು ಎಂದು ನಿರ್ದೇಶಿಸಿತ್ತು. ಅದರಂತೆ ರಾಜ್ಯ ಸರ್ಕಾರ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಲು ಅರ್ಹ ಪಿಪಿಗಳನ್ನು ಆಯ್ಕೆ ಮಾಡಲು 2021ರ ಜನವರಿ 8ರಂದು ಸ್ಕ್ರೀನಿಂಗ್ ಸಮಿತಿ ರಚಿಸಿ ಆದೇಶ ಹೊರಡಿಸಿದೆ.