ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ಮಾಜಿ ಸಚಿವ ಡಿ. ಸಿ. ತಮ್ಮಣ್ಣರವರ ಸಂಬಂಧಿ ಸಾವಿತ್ರಮ್ಮ ವಿರುದ್ಧ ಕೇತಗಾನಹಳ್ಳಿ ಭೂಕಬಳಿಕೆ ಆರೋಪ ಪ್ರಕರಣದ ಬಗ್ಗೆ ಲೋಕಾಯುಕ್ತರು ನೀಡಿರುವ ಆದೇಶದನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಿಳಿಸಿದೆ.
ಈ ಕುರಿತಂತೆ ಸಮಾಜ ಪರಿವರ್ತನಾ ಸಮಯದಾಯದ ಅಧ್ಯಕ್ಷ ಎಸ್. ಆರ್. ಹಿರೇಮಠ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಕಳೆದ ವಿಚಾರಣೆ ವೇಳೆ ನ್ಯಾಯಾಲಯ 54 ಎಕರೆ ತೆರವುಗೊಳಿಸುವಂತೆ ಲೋಕಾಯುಕ್ತರು 2014ರ ಆಗಸ್ಟ್. 5ರಂದು ಆದೇಶ ಮಾಡಿದ್ದರು ರಾಜ್ಯಸರಕಾರ ಕೈಗೊಂಡ ಕ್ರಮದ ಕುರಿತು ವರದಿ ಸಲ್ಲಿಕೆ ಮಾಡುವಂತೆ ಸೂಚಿಸಿತ್ತು. ಹೀಗಾಗಿ ಲೋಕಾಯುಕ್ತರು ನೀಡಿರುವ ಆದೇಶದನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಇಂದು ರಾಜ್ಯ ಸರಕಾರ ಹೈಕೋರ್ಟ್ ಗೆ ತಿಳಿಸಿದೆ.
ಅರ್ಜಿದಾರರ ಆರೋಪ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಜಮೀನಿನ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ಸುಮಾರು 75 ಲಕ್ಷದಿಂದ 1 ಕೋಟಿವರೆಗೆ ಇದೆ. ಆ ಜಮೀನನನ್ನು ಕುಮಾರಸ್ವಾಮಿ ಮತ್ತಿತರರು ಪ್ರತಿ ಎಕರೆಗೆ 5 ಸಾವಿರದಂತೆ ಖರೀದಿಸಿದ್ದಾರೆ. ಇದು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ವಿರುದ್ಧವಾಗಿದೆ.
ಇದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟವಾಗಿದೆ. ಭೂ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಲೋಕಾಯುಕ್ತ 2014ರ ಆ. 5ರಂದು ಆದೇಶಿಸಿದೆ. ಆದರೆ, ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿರುವ 54 ಎಕರೆ ತೆರವುಗೊಳಿಸಲು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.