ಬೆಂಗಳೂರು: ಯಲಹಂಕದ ಪುಟ್ಟೇನಹಳ್ಳಿ ಕೆರೆ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಿದ ನಗರಾಭಿವೃದ್ಧಿ ಇಲಾಖೆ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಯ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಯಲಹಂಕದ ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಮುಖ್ಯ ವನ್ಯಜೀವಿ ಪರಿಪಾಲಕ, ವನ್ಯಜೀವಿ ಸಂರಕ್ಷಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತು.
ಅರ್ಜಿಯಲ್ಲಿ, ಯಲಹಂಕದ ಪುಟ್ಟೇನಹಳ್ಳಿ ಕೆರೆ ಮತ್ತು ಅಚ್ಚುಕಟ್ಟು ಪ್ರದೇಶದಲ್ಲಿ 175ಕ್ಕೂ ಅಧಿಕ ಪ್ರಭೇದದ ಪಕ್ಷಿ ಸಂಕುಲವಿದೆ. ಹೀಗಾಗಿ, ಈ ಪ್ರದೇಶವನ್ನು ಪಕ್ಷಿ ಸಂರಕ್ಷಿತ ವಲಯವೆಂದು ಘೋಷಿಸಿ ಅರಣ್ಯ ಇಲಾಖೆ 2015ರ ಸೆಪ್ಟೆಂಬರ್ 10ರಂದು ಅಧಿಸೂಚನೆ ಹೊರಡಿಸಿದೆ. ಆದರೂ ನಗರಾಭಿವೃದ್ಧಿ ಇಲಾಖೆ 2019ರ ಡಿಸೆಂಬರ್ 11ರಂದು ಕೆರೆಯನ್ನು ಬಿಬಿಎಂಪಿ ನಿರ್ವಹಣೆಗೆ ವಹಿಸಿ ಆದೇಶಿಸಿದೆ. ಪಕ್ಷಿ ಸಂರಕ್ಷಣಾ ವಲಯವನ್ನು ಕೇವಲ ಕೆರೆ ಎಂದಷ್ಟೆ ನಮೂದಿಸಿ ಬಿಬಿಎಂಪಿಗೆ ಹಸ್ತಾಂತರಿಸಿದೆ. ಈಗ ಬಿಬಿಎಂಪಿ ಇಂಜಿನಿಯರ್ಗಳು ಕೆರೆ ಅಭಿವೃದ್ಧಿ ಮತ್ತು ನಿರ್ವಹಣೆಗೆ ಟೆಂಡರ್ ಕರೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಪಕ್ಷಿ ಸಂರಕ್ಷಿತ ವಲಯವನ್ನು ನಿರ್ವಹಣೆ ಮಾಡುವ ಕೌಶಲ್ಯ ಬಿಬಿಎಂಪಿಗೆ ಇಲ್ಲ. ಕೆರೆ ನಿರ್ವಹಣೆಯನ್ನು ಟೆಂಡರ್ ಮೂಲಕ ಬೇರೆಯವರಿಗೆ ವಹಿಸಿದರೆ ಸಮಸ್ಯೆ ಆಗಲಿದೆ. ಪಾಲಿಕೆ, ಕೆರೆ ಅಭಿವೃದ್ಧಿ ಮತ್ತು ನಿರ್ವಹಣೆಗೆ ಆಹ್ವಾನಿಸಿರುವ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಪುಟ್ಟೇನಹಳ್ಳಿ ಕೆರೆಯನ್ನು ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕರ ವ್ಯಾಪ್ತಿಗೆ ನೀಡಬೇಕು. ಕೆರೆಗೆ ನಗರದ ತ್ಯಾಜ್ಯ ನೀರು ಹರಿಯದಂತೆ ತಡೆಯಲು ಜಲಮಂಡಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.