ಬೆಂಗಳೂರು : ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದಿಸುವ ಸಂಸ್ಥೆಗಳಿಗೆ ರಾಯಧನ, ಜಿಎಸ್ಟಿ ಹಾಗೂ ಇತರೆ ತೆರಿಗೆಗಳನ್ನು ವಿಧಿಸದಿರಲು ಮತ್ತು ಲಸಿಕೆ ಉತ್ಪಾದನೆ ಸಾಗಣೆ, ವಿತರಣೆಯನ್ನು ಚುರುಕುಗೊಳಿಸಲು ಕೇಂದ್ರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಲಸಿಕೆ ಉತ್ಪಾದಕರಿಗೆ ರಾಯಲ್ಟಿ ಹಾಗೂ ತೆರಿಗೆಯಿಂದ ವಿನಾಯಿತಿ ನೀಡಲು ಕೋರಿ ಇಸ್ರೋದ ನಿವೃತ್ತ ಉದ್ಯೋಗಿ ಪ್ರೊ. ಎಸ್ ಚಂದ್ರಶೇಖರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಕೇಂದ್ರ ಸರ್ಕಾರ ಹಾಗೂ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ಪ್ರತಿವಾದಿಗಳು ಮುಂದಿನ 3 ವಾರಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.
ಅರ್ಜಿದಾರರ ಕೋರಿಕೆ
ದೇಶದ ಜನತೆಗೆ ತ್ವರಿತವಾಗಿ ಕೋವಿಡ್ ವ್ಯಾಕ್ಸಿನ್ ಲಸಿಕೆ ನೀಡದಿದ್ದರೆ ಜನರ ಆರೋಗ್ಯವಷ್ಟೇ ಅಲ್ಲ, ರಾಷ್ಟ್ರದ ಆರ್ಥಿಕತೆ ಹಾಗೂ ಭದ್ರತೆ ಮೇಲೂ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ದೇಶದ ಜನರಿಗೆ ಲಸಿಕೆ ನೀಡಲು ಅಂದಾಜು 2.7 ಬಿಲಿಯನ್ ಡೋಸ್ ಬೇಕಿದೆ.
ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಕರ್ನಾಟಕ ಕಬಡ್ಡಿ ಆಟಗಾರ್ತಿ ತೇಜಸ್ವಿನಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಆದರೆ, ದೇಶದಲ್ಲಿನ ವ್ಯಾಕ್ಸಿನ್ ಉತ್ಪಾದನೆ ಗಮನಿಸಿದರೆ ಈ ಗುರಿಯನ್ನು ಸಾಧಿಸಲು ಅಸಾಧ್ಯ. ಆದ್ದರಿಂದ, ಪೇಟೆಂಟ್ ಕಾಯ್ದೆಯ ಸೆಕ್ಷನ್ 92 ಅಡಿ ಕಡಿಮೆ ಬೆಲೆಯಲ್ಲಿ ವ್ಯಾಕ್ಸಿನ್ ಪೂರೈಸಲು ಕ್ರಮ ಕೈಗೊಳ್ಳುವಂತೆ, ಜಾಗತಿಕವಾಗಿ ಕೋವಿಡ್ ವ್ಯಾಕ್ಸಿನ್ ಉತ್ಪಾದಿಸುವ ಸಂಸ್ಥೆಗಳಿಗೆ ದೇಶದಲ್ಲಿ ವ್ಯಾಕ್ಸಿನ್ ಉತ್ಪಾದಿಸಲು ಅವಕಾಶ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದೇ ವೇಳೆ ಲಸಿಕೆ ಉತ್ಪಾದನೆಯನ್ನು ಉತ್ತೇಜಿಸಲು ಉತ್ಪಾದಕರಿಗೆ ರಾಯಧನ, ಜಿಎಸ್ಟಿ ಹಾಗೂ ಇತರೆ ತೆರಿಗೆಗಳಿಂದ ವಿನಾಯಿತಿ ನೀಡಲು ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.