ಬೆಂಗಳೂರು: ಮಹಾದಾಯಿ ಹೋರಾಟದ ಸಂದರ್ಭದಲ್ಲಿ ಪೊಲೀಸರಿಂದ ಲಾಠಿ ಚಾರ್ಜ್ಗೆ ಒಳಗಾದ ರೈತರಿಗೆ ಪರಿಹಾರ ಕಲ್ಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ವಕೀಲ ಅಮೃತೇಶ್ ಅವರು ರೈತರ ಪರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು.
ಹೋರಾಟದಲ್ಲಿ ಪೊಲೀಸರ ಲಾಠಿ ಏಟು ತಿಂದ ಸಂತ್ರಸ್ತರಿಗೆ ಬಿಡಿಗಾಸಿನ ಪರಿಹಾರ ನೀಡಲು ಇದುವರೆಗೂ ಕ್ರಮ ಕೈಗೊಂಡಿಲ್ಲ. ಅಂದು ನಡೆದ ಘಟನೆಗಳ ವಿಡಿಯೋ ಇದೆ. ಆದರೂ ಸರ್ಕಾರ ಕ್ರಮ ಜರುಗಿಸದೇ ಇರುವುದು ನೋವಿನ ಸಂಗತಿ. ಇದರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ವಕೀಲ ಅಮೃತೇಶ್ ವಾದ ಮಂಡಿಸಿದರು.
ಈ ವೇಳೆ ನ್ಯಾಯಪೀಠ, ಘಟನೆ ನಡೆದ ಬಳಿಕ ಎಡಿಜಿಪಿ ಕಮಲ್ ಪಂತ್ ಅವರು ವರದಿ ಸಲ್ಲಿಸಿದ್ದಾರೆ. ಅದರ ಆಧಾರದ ಮೇಲೆ ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಸೆ.19ಕ್ಕೆ ಮುಂದೂಡಿದೆ.