ಬೆಂಗಳೂರು: ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿದ್ದು ಪಿ. ಅಲಗೂರು ಅವರನ್ನು ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯಲದ ಕುಲಪತಿ ಹುದ್ದೆಗೆ ನೇಮಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಈ ಕುರಿತು ಬೆಳಗಾವಿಯ ಶಿಕ್ಷಣ ತಜ್ಞ ಡಾ.ಎಂ.ಆರ್.ನಿಂಬಾಳ್ಕರ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಪ್ರಕರಣದ ಕುರಿತು ಕೆಲಕಾಲ ವಾದ ಆಲಿಸಿದ ಪೀಠ, ರಾಣಿ ಚೆನ್ನಮ್ಮ ವಿವಿಯಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾಗಿರುವ ಪ್ರೊ.ಸಿದ್ದು ಪಿ. ಅಲಗೂರು ವಿರುದ್ಧದ ಆರೋಪಗಳಿಗೆ ಸೂಕ್ತ ಸಾಕ್ಷ್ಯಗಳಿಲ್ಲ. ಹಾಗೆಯೇ, ಸಿದ್ದು ಪಿ. ಅಲಗೂರು ನಕಲಿ ದಾಖಲೆ ಸಲ್ಲಿಸಿ ಅಕ್ರಮವಾಗಿ ರಾಣಿ ಚೆನ್ನಮ್ಮ ವಿವಿಯಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಕೃಷ್ಣ ದೇವರಾಯ ವಿವಿಯ ಕುಲಪತಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಅರ್ಜಿದಾರರ ಆರೋಪವೇನು?:
19888-89 ರಿಂದ 1991-92ನೇ ಸಾಲಿನಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ವಿವಿಯಿಂದ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಪ್ರೊ.ಸಿದ್ದು ಅಲಗೂರು ಹೇಳಿದ್ದಾರೆ. ಆದರೆ, ಅಲಹಾಬಾದ್ ವಿವಿ ರಿಜಿಸ್ಟ್ರಾರ್ ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಮಾಹಿತಿಯಂತೆ ಆ ಕಾಲಾವಧಿಯಲ್ಲಿ ವಿವಿಯಲ್ಲಿ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸ್ನಾತಕೋತ್ತರ ಕೋರ್ಸ್ ಇರಲಿಲ್ಲ ಎಂದು ದೃಢಪಡಿಸಿದ್ದಾರೆ. ಆದ್ದರಿಂದ, ನಕಲಿ ದಾಖಲೆ ಸಲ್ಲಿಸಿ ಪಡೆದುಕೊಂಡಿರುವ ಪ್ರಾಧ್ಯಾಪಕ ಹುದ್ದೆಯಿಂದ ಸಿದ್ದು ಪಿ. ಅಲಗೂರು ಅವರನ್ನು ವಜಾಗೊಳಿಸಬೇಕು. ಕೃಷ್ಣದೇವರಾಯ ವಿವಿಗೆ ಕುಲಪತಿಯಾಗಿ ಅವರನ್ನು ನೇಮಕ ಮಾಡಿ 2019ರ ಜುಲೈ 30ರಂದು ಹೊರಡಿಸಿರುವ ಆದೇಶ ರದ್ದು ಪಡಿಸಬೇಕೆಂದು ಅರ್ಜಿದಾರರು ಕೋರಿದ್ದರು.