ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ಇರುವ ವಸತಿ ರಹಿತರನ್ನು ಗುರುತಿಸಲು ಸರ್ವೆ ನಡೆಸಿ, ಆ ಕುರಿತ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿಯಲ್ಲಿ ನಗರದ ವಸತಿ ರಹಿತರಿಗೆ ಸೂರು ಕಲ್ಪಿಸುವಂತೆ ಕೋರಿ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ಪೀಠ, ರಾಜ್ಯದಲ್ಲಿ ನಿರಾಶ್ರಿತರಿಗಾಗಿ 67 ನೈಟ್ ಶೆಲ್ಟರ್ಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ 40 ಮಾತ್ರ ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ. ಅವುಗಳಲ್ಲೂ ಬಹುತೇಕ ಸೂಕ್ತ ಸೌಲಭ್ಯಗಳಿಲ್ಲ. ಇನ್ನು ಇಲ್ಲಿ ಆಸರೆ ಪಡೆದಿರುವವರಿಗೆ ಸೂರು ಕಲ್ಪಿಸುವ ಕುರಿತು ಯಾವುದೇ ನಿಲುವು ತಿಳಿಸದೆ ಸರ್ಕಾರ ಮೌನ ಧೋರಣೆ ತಳೆದಿದೆ. ಈ ಮೂಲಕ ಸಂವಿಧಾನದ ವಿಧಿ 21ರಡಿ ಘನತೆಯಿಂದ ಜೀವಿಸುವ ಹಕ್ಕು ನಿರ್ಲಕ್ಷಿಸಿದೆ.
ಆದ್ದರಿಂದ, ಸರ್ಕಾರ ರಾಜ್ಯದ ಎಲ್ಲ ನಗರಗಳಲ್ಲಿರುವ ನಿರ್ವಸಿತರನ್ನು ಗುರುತಿಸಬೇಕು. ಎಲ್ಲೆಲ್ಲಿ ಎಷ್ಟೆಷ್ಟು ಮಂದಿ ನಿರ್ವಸಿತರಿದ್ದಾರೆ ಎಂಬುದನ್ನು ಸರ್ವೆ ಮಾಡಿ ಗುರುತಿಸಬೇಕು. ಜತೆಗೆ ಅವರಿಗೆ ಸೂರು ಕಲ್ಪಿಸುವ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆಯೂ ವರದಿ ಸಿದ್ಧಪಡಿಸಿ ಪ್ರಮಾಣಪತ್ರದೊಂದಿಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.