ಬೆಂಗಳೂರು : ಕೊಡಗು ಜಿಲ್ಲೆ ಮಡಿಕೇರಿಯ ಐತಿಹಾಸಿಕ ಅರಮನೆ ಕಟ್ಟಡ ಸಂರಕ್ಷಣಾ ಕಾಮಗಾರಿಗಾಗಿ ಟೆಂಡರ್ ಕರೆಯುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಶಿಥಿಲಾವಸ್ಥೆಯಲ್ಲಿರುವ ಮಡಿಕೇರಿ ಕೋಟೆ ಹಾಗೂ ಅರಮನೆ ಕಟ್ಟಡವನ್ನು ಸಂರಕ್ಷಿಸಿ ನವೀಕರಣಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಆಲೂರು ಸಿದ್ದಾಪುರ ಗ್ರಾಮದ ನಿವಾಸಿ ಜೆ.ಎಸ್.ವಿರೂಪಾಕ್ಷಯ್ಯ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದ ಭಾರತೀಯ ಪುರಾತತ್ವ ಇಲಾಖೆ ಪರ ವಕೀಲರು, ಈಗಾಗಲೇ 53 ಲಕ್ಷ ರೂ. ಮೊತ್ತದಲ್ಲಿ ಅರಮನೆ ಕಟ್ಟಡದ ದುರಸ್ಥಿ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನು, 10.76 ಕೋಟಿ ರೂ. ಮೊತ್ತದ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲು ಯೋಜಿಸಲಾಗಿದೆ.
36 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅದಕ್ಕೆ ಅಗತ್ಯ ಕಾಲಾವಕಾಶ ನೀಡಬೇಕು ಎಂದು ಕೋರಿ ಈ ಸಂಬಂಧ ಇಲಾಖೆಯ ಬೆಂಗಳೂರು ವಿಭಾಗದ ಅಧೀಕ್ಷಕರು ಸಿದ್ದಪಡಿಸಿದ್ದ ಪ್ರಮಾಣ ಪತ್ರ ಸಲ್ಲಿಸಿದರು.
ವಾದ ಪರಿಗಣಿಸಿದ ಪೀಠ, ಅರಮನೆ ಸಂರಕ್ಷಣೆ ಮಾಡಲು ಅಗತ್ಯ ಕಾಮಗಾರಿಗಳನ್ನು ನಡೆಸಬೇಕು. ಅದಕ್ಕಾಗಿ ಸೂಕ್ತ ಯೋಜನೆ ರೂಪಿಸಿ ಟೆಂಡರ್ ಕರೆಯುವಂತೆ ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.