ಬೆಂಗಳೂರು: ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಮನಗರದ 3 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಬೇಕು ಹಾಗೂ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿರುವ ಹೈಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ.
ನಿತ್ಯಾನಂದ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರಾಮನಗರದಿಂದ ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಬಿ.ಎ ಪಾಟೀಲ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ಈ ವಿಚಾರವನ್ನು ಮತ್ತಷ್ಟು ಎಳೆಯುವುದು ಸೂಕ್ತ ಅಲ್ಲವೆಂದು ಅಭಿಪ್ರಾಯಪಟ್ಟು, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದಿಸಿ, ಆರೋಪಿ ನಿತ್ಯಾನಂದ ಸ್ವಾಮೀಜಿ ನಿಯಮ ಉಲ್ಲಂಘಿಸಿ ದೇಶ ಬಿಟ್ಟು ಹೋಗಿದ್ದಾರೆ. ಈವರೆಗೂ ಎಲ್ಲಿದ್ದಾರೆ ಎಂದು ತಿಳಿದುಬಂದಿಲ್ಲ. ಪ್ರಕರಣದ ವಿಚಾರಣೆಗೆ ಹಾಜರಾಗದ ನಿತ್ಯಾನಂದ ಚಾತುರ್ಮಾಸ ಪೂಜೆ ನೆಪ ಹೇಳಿಕೊಂಡು ಗೈರಾಗುತ್ತಿದ್ದಾರೆ ಎಂದು ದೂರಿದರು.
ಅರ್ಜಿದಾರರ ಪರ ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ನಿತ್ಯಾನಂದ ಪರ ಹಿರಿಯ ವಕೀಲ ಸಿ.ವಿ ನಾಗೇಶ್, ಸೆಷನ್ಸ್ ಕೋರ್ಟ್ ವಿಚಾರಣೆಗೆ ನಮ್ಮ ಪರ ವಕೀಲರು ತಪ್ಪದೇ ಹಾಜರಾಗುತ್ತಿದ್ದಾರೆ. ಆದರೆ, ದೂರುದಾರ ಲೆನಿನ್ ವಿಚಾರಣೆಗೆ ಸರಿಯಾಗಿ ಹಾಜರಾಗುತ್ತಿಲ್ಲ. ಒಮ್ಮೆ ಮಾತ್ರ ವಿಚಾರಣೆಗೆ ಹಾಜರಾಗಿರುವ ಲೆನಿನ್, ತದ ನಂತರ ವಿಚಾರಣೆಗಳಿಗೆ ನಿರಂತರವಾಗಿ ಗೈರಾಗುತ್ತಿದ್ದಾರೆ. ಎರಡು ಬಾರಿ ಅನಾರೋಗ್ಯದ ಸುಳ್ಳು ಹೇಳಿ ವಿಚಾರಣೆಗೆ ಗೈರಾಗಿದ್ದಾರೆ. ಸುಪ್ರೀಂಕೋರ್ಟ್ ವಿಚಾರಣಾ ನ್ಯಾಯಾಲಯ ಅನಗತ್ಯವಾಗಿ ವಿಚಾರಣೆ ವಿಳಂಬ ಮಾಡಬಾರದು ಎಂದಿದೆ. ಅದರಂತೆ ನಿತ್ಯಾನಂದ ಪರ ವಕೀಲರು ನಿಯಮಾನುಸಾರ ವಿಚಾರಣಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಲೆನಿನ್ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.