ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಹುದ್ದೆಗೆ ನೇಮಕಗೊಂಡವರು ಪೂರ್ಣಾವಧಿ ಕಾರ್ಯ ನಿರ್ವಹಿಸಬೇಕು. ಹೀಗಾಗಿ, ಶಾಸಕರಾದವರನ್ನು ಇಂತಹ ಹುದ್ದೆಗೆ ನೇಮಕ ಮಾಡಿದಾಗ ಅವರು ವಿಧಾನಸಭೆಗೆ ಗೈರಾಗಬಹುದೇ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಬಿಡಿಎ ಅಧ್ಯಕ್ಷ ಹುದ್ದೆಗೆ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ವಕೀಲ ಎ.ಎಸ್ ಹರೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ಅವರಿದ್ಧ ಪೀಠ ಈ ಪ್ರಶ್ನೆ ಎತ್ತಿದ್ದು, ವಿವರಣೆ ನೀಡುವಂತೆ ಸೂಚಿಸಿದೆ.
ಹೈಕೋರ್ಟ್ ಹೇಳಿದ್ದೇನು?: ವಿಚಾರಣೆ ವೇಳೆ ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಕಾನೂನಿನ ಪ್ರಕಾರ ಬಿಡಿಎ ಅಧ್ಯಕ್ಷರು ಪೂರ್ಣಾವಧಿಗೆ ನೇಮಕವಾಗಬೇಕು. ಶಾಸಕರಾದವರು ಈ ಹುದ್ದೆಗೆ ನೇಮಕವಾದರೆ ಅವರು ಬಿಡಿಎ ಅಧ್ಯಕ್ಷರಾಗಿ ಪೂರ್ಣಾವಧಿ ಹೇಗೆ ಸೇವೆ ಸಲ್ಲಿಸುತ್ತಾರೆ.? ಬಿಡಿಎಯಲ್ಲಿ ಪೂರ್ಣಾವಧಿ ಸೇವೆ ಸಲ್ಲಿಸುವುದಾದರೆ ಅವರು ಶಾಸಕರಾಗಿ ವಿಧಾನಸಭೆಗೆ ಗೈರುಹಾಜರಾಗಬಹುದೇ?. ಇನ್ನು ಶಾಸಕರು ಸಂಭಾವನೆ ಪಡೆಯುವಂತಹ ಮತ್ತೊಂದು ಹುದ್ದೆ ಹೊಂದುವಂತಿಲ್ಲ. ಹೀಗಾಗಿ, ಅಧ್ಯಕ್ಷರಾಗಿರುವ ವಿಶ್ವನಾಥ್ ಬಿಡಿಎಯಿಂದ ಸಂಭಾವನೆ ಪಡೆದಿದ್ದಾರಾ?. ಈ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬ ಕುರಿತಂತೆ ವಿವರಣೆ ನೀಡಲು ಸೂಚಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ವಾದ ಮಂಡಿಸಿ, ಬಿಡಿಎ ಕಾಯ್ದೆಯ ಸೆಕ್ಷನ್ 3(5)ರ ಪ್ರಕಾರ ಅಧ್ಯಕ್ಷರು ಪೂರ್ಣಾವಧಿ ಕಾರ್ಯನಿರ್ವಹಿಸಬೇಕು. ಶಾಸಕರಾದವರು ಪೂರ್ಣ ಪ್ರಮಾಣದಲ್ಲಿ ಹೇಗೆ ಅಧ್ಯಕ್ಷರಾಗಲು ಸಾಧ್ಯ?. ಬಿಡಿಎ ಸದಸ್ಯರನ್ನು ಕೂಡ ನಿಯಮಾನುಸಾರ ನೇಮಕ ಮಾಡಲಾಗುತ್ತದೆ. ಅಂತಹುದರಲ್ಲಿ ಎಸ್.ಆರ್ ವಿಶ್ವನಾಥ್ ಅವರನ್ನು ನಾಮನಿರ್ದೇಶನದಂತೆ ಹದ್ದೆಗೆ ನೇಮಕ ಮಾಡಿರುವ ಕ್ರಮ ಸರಿಯಲ್ಲ. ಸಂವಿಧಾನದ ವಿಧಿ 191 (1) (ಎ) ಪ್ರಕಾರ ಸಂಭಾವನೆ ಸಿಗುವಂತಹ ಹುದ್ದೆ ಪಡೆದರೆ ಶಾಸಕ ಹುದ್ದೆ ಕಳೆದುಕೊಳ್ಳುತ್ತಾರೆ. ಹೀಗಾಗಿ, ಎಸ್.ಆರ್ವಿ.ಶ್ವನಾಥ್ ಅವರಿಗೆ ಬಿಡಿಎ ಹುದ್ದೆ ನೀಡಿರುವುದು ಕಾನೂನುಬಾಹಿರ ಎಂದು ವಾದಿಸಿದರು.
ಇದನ್ನೂ ಓದಿ: ಪ್ರೀತಿಸಿ ವಿವಾಹವಾದ ತಮಿಳುನಾಡು ಸಚಿವರ ಪುತ್ರಿ: ರಕ್ಷಣೆ ಕೋರಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ