ಬೆಂಗಳೂರು: ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಇಂದಿನಿಂದ ಜುಲೈ 12ರವರೆಗೆ ಆರಂಭದಲ್ಲಿ ಹಗುರದಿಂದ ಸಾಧಾರಣ ಹಾಗೂ ವ್ಯಾಪಕ ಮಳೆಯಾಗಲಿದೆ. ಆದರೆ ಹನ್ನೊಂದರವರೆಗೆ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆ ಪ್ರದೇಶಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಜುಲೈ 9ರಿಂದಲೂ ಮಳೆ ತೀವ್ರತೆ ಹೆಚ್ಚಾಗುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೆಲವೆಡೆ 9 ಹಾಗೂ 10ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ತಿಳಿಸಿದರು.
ಇಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಶೇ. 70-100ರಷ್ಟು ವಿಸ್ತೀರ್ಣದ ಪ್ರದೇಶದಲ್ಲಿ ಮಳೆಯಾಗಿದೆ. ಉಡುಪಿಯ ಕೊಲ್ಲೂರಿನಲ್ಲಿ 20 ಸೆ.ಮೀ. ಮಳೆ ದಾಖಲಾಗಿದ್ದು, ರಾಜ್ಯದಲ್ಲೇ ಸುರಿದ ಗರಿಷ್ಠ ಮಳೆಯಾಗಿದೆ. ಮಂಕಿಯಲ್ಲಿ 17 ಸೆಂ.ಮೀ., ಕೋಟಾದಲ್ಲಿ 17, ಕಾರ್ಕಳದಲ್ಲಿ 13 ಸೆಂ.ಮೀ. ಮಳೆ ದಾಖಲಾಗಿದೆ. ಪುತ್ತೂರು 12, ಕುಂದಾಪುರ 10, ಸಿದ್ಧಾಪುರದಲ್ಲಿ 10 ಸೆಂ.ಮೀ. ಮಳೆಯಾಗಿದೆ.
ಇಂದು ಉತ್ತರ ಒಳನಾಡಿನಲ್ಲೂ ವ್ಯಾಪಕ ಮಳೆಯಾಗಿದೆ. ಮುಂದಿನ ಐದು ದಿನವೂ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮೊದಲು ಹಗುರದಿಂದ ಆರಂಭವಾಗಿ ಸಾಧಾರಣ ಹಾಗೂ ವ್ಯಾಪಕವಾಗಿ ಮಳೆಯಾಗಲಿದೆ ಎಂದರು. ಜುಲೈ 8, 9 ಹಾಗೂ 10ರಂದು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.