ಬೆಂಗಳೂರು: ರಾಜಧಾನಿಯ ಎಲ್ಲ ಕಡೆ ಶುಕ್ರವಾರ ಕೂಡ ವರುಣ ಅಬ್ಬರಿಸಿದ್ದಾನೆ. ಸಂಜೆಯ ನಂತರ ಬಿಡುವು ಕೊಟ್ಟ ಮಳೆ ಮತ್ತೆ ಪ್ರಾರಂಭವಾಗಿ, ತಗ್ಗು ಪ್ರದೇಶಗಳಿಗೆ ನೀರು ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿ, ರಾತ್ರಿ ಮನೆಗೆ ತೆರಳುತ್ತಿರುವ ವಾಹನ ಸವಾರರು ಹೈರಾಣಾಗಿದ್ದಾರೆ.
ನಗರದ ಬನ್ನೇರುಘಟ್ಟ, ನೆಲಮಂಗಲ, ರಿಚ್ಮಂಡ್ ಸರ್ಕಲ್, ಶಾಂತಿನಗರ, ಮೆಜೆಸ್ಟಿಕ್, ಎಂ.ಜಿ ರಸ್ತೆ, ಲಾಲ್ಬಾಗ್, ಬಸವನಗುಡಿ, ಜಯನಗರ, ಜೆ.ಪಿ ನಗರ, ಕೋರಮಂಗಲ, ಹಲಸೂರಿನ, ಶೇಷಾದ್ರಿಪುರ ಮಲ್ಲೇಶ್ವರ, ಫ್ರೀಡಂ ಪಾರ್ಕ್, ಕೆ.ಆರ್.ವೃತ್ತ, ಕಾರ್ಪೋರೇಷನ್ ವೃತ್ತ, ಮೈಸೂರು ರಸ್ತೆ, ಜಯನಗರ, ಲಾಲ್ ಬಾಗ್ ರಸ್ತೆಯಲ್ಲಿ ಭಾರಿ ಮಳೆಯಾಗುತ್ತಿದೆ.
ರಾತ್ರಿ 9 ಗಂಟೆಯಿಂದ ಮಳೆ ಜೋರಾಗಿದೆ. ಸಂಜೆ ದಿಢೀರನೇ ಮಳೆ ಸುರಿದಿದ್ದರಿಂದ ಮನೆಯ ಕಡೆ ಹೊರಟ ಜನರು ರಸ್ತೆಮಧ್ಯೆಯೇ ಸಿಲುಕಿ, ಬಸ್ಸ್ಟಾಂಡ್, ಅಂಗಡಿ, ಅಂಡರ್ ಪಾಸ್ ಕೆಳಗೆ ಆಶ್ರಯ ಪಡೆದ ದೃಶ್ಯ ಕಂಡು ಬಂದಿದೆ. ಈ ಕಾರಣದಿಂದ ಹಲವೆಡೆ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು. ನಗರದ ಕುರುಬರಹಳ್ಳಿ, ಮೂಡಲಪಾಳ್ಯ, ಹೆಚ್ಎಸ್ಆರ್ ಲೇಔಟ್, ಕೋರಮಂಗಲ, ಚಿಕ್ಕಕಲ್ಲಸಂದ್ರ, ಪದ್ಮನಾಭನಗರ, ವಿಜಯನಗರ, ರಾಯಪುರಂ, ಬಸವೇಶ್ವರನಗರ, ಜಯನಗರ, ಶಿವಾಜಿನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದೆ.
ಹಲವು ದಿನ ಮಳೆ: ನೈರುತ್ಯ ಮುಂಗಾರು ಮಳೆಯ ಆರ್ಭಟ ಹೆಚ್ಚಾಗಿದ್ದು, ರಾಜ್ಯದಲ್ಲಿ ಇನ್ನೂ ಹಲವು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ: ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ ತೀವ್ರತೆ ಪಡೆದುಕೊಳ್ಳಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ರಾಜಧಾನಿಯಲ್ಲಿ ಅಬ್ಬರಿಸಿದ ವರುಣ: ಜನಸಾಮಾನ್ಯರ ಪರದಾಟ