ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸತತ ಮೂರನೇ ದಿನವೂ ಮಳೆಯಾಗುತ್ತಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಆಗಿ ಜನರು ಪೇಚಿಗೆ ಸಿಲುಕಿದ್ದು ಕಂಡು ಬಂತು. ಇನ್ನು ರಾಜ್ಯದಲ್ಲಿ ಮುಂದಿನ ಎರಡು ದಿನವೂ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದ ಟ್ರಿನಿಟಿ ಸರ್ಕಲ್, ಎಮ್ಜಿ ರಸ್ತೆ, ಮೆಜೆಸ್ಟಿಕ್, ಗಾಂಧಿನಗರ, ಜಯನಗರ, ಬಸವೇಶ್ವರ ವೃತ್ತ, ಶಿವಾನಂದ ಸರ್ಕಲ್, ವಸಂತನಗರ ಸುತ್ತಮುತ್ತ ಧಾರಾಕಾರ ಗಾಳಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಸಮಸ್ಯೆ ಉಂಟಾಗಿದೆ.
ಕರಾವಳಿಯಲ್ಲಿ ಐದು ದಿನ ವ್ಯಾಪಕ ಮಳೆ : ಹವಾಮಾನ ಇಲಾಖೆಯ ಸದಾನಂದ ಅಡಿಗ ಮಳೆಯ ಕುರಿತು ಮಾಹಿತಿ ನೀಡಿದ್ದು, ಮುಂದಿನ 5 ದಿನ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಬಹುತೇಕ ಕಡೆ ಮಳೆಯಾಗಲಿದೆ. ಏಪ್ರಿಲ್ 18, 19 ರಂದು ಕೆಲ ಜಿಲ್ಲೆಗಳಿಗೆ ಮಾತ್ರ ಮಳೆಯಾಗಲಿದೆ. 20ರಂದು ಒಣಹವೆ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರ ಒಳನಾಡಿನಲ್ಲೂ ಗುಡುಗು ಸಹಿತ ಮಳೆ: ಚಾಮರಾಜನಗರ, ಬೆಂಗಳೂರು, ಪಶ್ಚಿಮ ಘಟ್ಟ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲೂ ಗುಡುಗು ಹಾಗೂ ಸಿಡಿಲಿನ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಿದ್ದಾರೆ. ಕಳೆದ 24 ಗಂಟೆಯಲ್ಲಿ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ ಎಂದು ತಿಳಿಸಿದ್ದಾರೆ.
ಕಲ್ಬುರ್ಗಿಯಲ್ಲಿ ಅತಿ ಹೆಚ್ಚು ಉಷ್ಣಾಂಶ : ಬೆಂಗಳೂರಿನ ಜಾಲಹಳ್ಳಿಯಲ್ಲಿ 8 ಸೆಂ.ಮೀ, ಹೆಸರಘಟ್ಟದಲ್ಲಿ 7 ಸೆಂ.ಮೀ ಮಳೆಯಾಗಿದೆ. ಗರಿಷ್ಟ ಉಷ್ಣಾಂಶ ಕಲಬುರಗಿಯಲ್ಲಿ 38.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹೇಳಿದ್ದಾರೆ.
(ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಆರ್ಭಟ: ಹಲವು ಮನೆಗಳಿಗೆ ನುಗ್ಗಿದ ನೀರು, ಜನ ಜೀವನ ಅಸ್ತವ್ಯಸ್ತ)