ನೆಲಮಂಗಲ: ಭಿಕ್ಷುಕನ ಬಳಿ ಇದ್ದ ಹಳೆ ಗಂಟನ್ನು ಎಸೆಯಲು ಜನರು ಮುಂದಾದಾಗ ಅಚ್ಚರಿ ಕಾದಿತ್ತು. ಕಾರಣ ಆ ಗಂಟಿನಲ್ಲಿ ರಾಶಿ ರಾಶಿ ನೋಟುಗಳನ್ನು ಕಂಡು ಜನರು ಆಶ್ಚರ್ಯಚಕಿತರಾದ ಘಟನೆ ತಾಲೂಕಿನ ಬರದಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ರಂಗಸ್ವಾಮಯ್ಯ ಎಂಬ ಭಿಕ್ಷುಕ ಕೂಡಿಟ್ಟ ಹಣ ನೋಡಿದ ಗ್ರಾಮಸ್ಥರು ನಿಜಕ್ಕೂ ಹೌಹಾರಿದ್ರು. ವರ್ಷಾನುಗಟ್ಟಲೆ ಭಿಕ್ಷೆ ಬೇಡಿದ್ದ ಹಣವನ್ನ ಜೋಪಾನವಾಗಿ ಗಂಟುಕಟ್ಟಿ ಕಾಪಾಡಿದ್ದ ಈ ರಂಗಸ್ವಾಮಯ್ಯ. ಹಣವನ್ನು ಎಣಿಸಲು ಶುರು ಮಾಡಿದ ಗ್ರಾಮಸ್ಥರಿಗೆ 60 ಸಾವಿರ ರೂ. ಹಣದ ಲೆಕ್ಕ ಸಿಕ್ಕಿದೆ.
ದಿವ್ಯಾಂಗನಾಗಿದ್ದ ರಂಗಸ್ವಾಮಯ್ಯನು ತಂದೆ-ತಾಯಿ ಸಾವಿನ ಬಳಿಕ ಭಿಕ್ಷಾಟನೆ ಮೂಲಕ ಬದುಕು ಸಾಗಿಸುತ್ತಿದ್ದ. ಹರಿದ ಬಟ್ಟೆ ಕೊಳಕು ದೇಹದ ಭಿಕ್ಷುಕನ ಹತ್ತಿರ ಹೋಗಲು ಜನರು ಹಿಂಜರಿಯುತ್ತಿದ್ದರು. ಪ್ರತಿನಿತ್ಯ ಯಾರಾದೂ ಒಬ್ಬರು ಊಟ ಇಲ್ಲವೇ ಕೈಲಾದಷ್ಟು ಹಣ ನೀಡುತ್ತಿದ್ದರು. ಜೊತೆಗೆ ಮಾಶಾಸನವೂ ಈತನಿಗೆ ಬರುತ್ತಿದೆ. ಅದೇ ಹಣವನ್ನು ಖರ್ಚು ಮಾಡದೇ ರಂಗಸ್ವಾಮಯ್ಯ ಕೂಡಿಟ್ಟಿದ್ದಾನೆ.
ಈತನ ಬಳಿ ಹಣ ಇದೆಯೆಂಬ ಸಣ್ಣ ಯೋಚನೆಯೂ ಗ್ರಾಮಸ್ಥರಿಗೆ ಇರಲಿಲ್ಲ. ಆದರೆ ಆಕಸ್ಮಿಕವಾಗಿ ಕೊಳಕಾದ ಬಟ್ಟೆಯ ಗಂಟುಗಳನ್ನ ಎಸೆಯಲು ಮುಂದಾದ ಗ್ರಾಮಸ್ಥರಿಗೆ 'ಎಸೆಯಬೇಡಿ, ಅದರಲ್ಲಿ ಮೂಟೆ ಹಣವಿದೆ' ಎಂದು ವಿಕಲಚೇತನ ಭಿಕ್ಷುಕ ರಂಗಸ್ವಾಮಯ್ಯ ತಿಳಿಸಿದಾಗ ಗ್ರಾಮಸ್ಥರು ಬಟ್ಟೆಯಲ್ಲಿದ್ದ ರಾಶಿ ರಾಶಿ ಹಣವನ್ನು ನೋಡಿ ಶಾಕ್ ಆಗಿದ್ದಾರೆ.
ಸದ್ಯ ರಂಗಸ್ವಾಮಯ್ಯನ ಹಣ ದುರ್ಬಳಕೆ ಆಗಬಾರದು ಎಂಬ ದೃಷ್ಟಿಯಿಂದ ಗ್ರಾಮಸ್ಥರು ಬ್ಯಾಂಕ್ ಖಾತೆ ತೆರೆಯಲು ಇಲ್ಲವೇ ಅನಾಥಾಶ್ರಮಕ್ಕೆ ನೀಡಿ ಅವರನ್ನು ಅಲ್ಲಿಗೆ ಸೇರಿಸುವ ಚಿಂತನೆಯಲ್ಲಿದ್ದಾರೆ.