ಬೆಂಗಳೂರು: ಕೊರೊನಾ ಮೂರನೇ ಅಲೆ ಬರುವುದನ್ನು ತಡೆಯಲು ದೊಡ್ಡಮಟ್ಟದ ಸಿದ್ಧತೆಯಾಗಬೇಕು. ಯಾವುದೋ ಹಂತದಲ್ಲಿ ನಾವು ಸ್ವಲ್ಪ ಪ್ರಮಾಣದ ತ್ಯಾಗಕ್ಕೆ ರೆಡಿಯಾಗಬೇಕು. ಸಂಪೂರ್ಣ 14 ದಿನ ಚೈನ್ ಬ್ರೇಕ್ ಹಾಕಲು ಈ ಕಠಿಣ ಕ್ರಮ ಅನಿವಾರ್ಯವಾಗಿದ್ದು, ಸರ್ಕಾರದ ಜೊತೆ ಜನರು ಸಹಕರಿಸುವಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಮನವಿ ಮಾಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾತ್ರಿಯಿಂದ 14 ದಿನ ನೂತನ ಮಾರ್ಗಸೂಚಿ ಜಾರಿಯಲ್ಲಿರಲಿದೆ. ಅಗತ್ಯ ಸೇವೆಗೆ ಕಾಲಮಿತಿಯ ಅವಕಾಶ ಕಲ್ಪಿಸಿದ್ದು, ಜನರು ಅಗತ್ಯ ವಸ್ತುಗಳ ಬಗ್ಗೆ ಆತಂಕಕ್ಕೆ ಸಿಲುಕಬೇಕಿಲ್ಲ. ಹೋಟೆಲ್ಗಳಲ್ಲಿ ಪಾರ್ಸಲ್ ಸೇವೆ ಇರಲಿದೆ. ಆದರೆ, ಜನರ ಅನಗತ್ಯ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದ್ದು, ಸಾರ್ವಜನಿಕ ಸಾರಿಗೆ ಸ್ಥಗಿತವಾಗಿರಲಿದೆ. ಜನರಿಗೆ ಸ್ವಲ್ಪ ಕಷ್ಟವಾದರೂ ಕೊರೊನಾ ಎರಡನೇ ಅಲೆಯ ಚೈನ್ ಬ್ರೇಕ್ ಮಾಡಲು ಇದು ಅನಿವಾರ್ಯ ಎಂದರು.
ಲಸಿಕೆ ಕೊಡುವುದರ ಬಗ್ಗೆ ಅನೇಕ ಊಹಾಪೂಹಗಳಿವೆ:
ಮಾರ್ಗಸೂಚಿ ಬಿಡುಗಡೆ ಬಳಿಕ ಚಟುವಟಿಕೆಗಳಿಗೆ ನಿರ್ಬಂಧ ಇದೆ. ಹಾಗಾಗಿ, ಲಸಿಕೆ ಸಿಗಲ್ಲ ಅಂತ ಕೆಲವರು ಸುಳ್ಳು ಹೇಳಿದ್ದಾರೆ. ಅಗತ್ಯ ಸೇವೆಗಳು ಇರಲಿವೆ. ಲಸಿಕೆ ಪಡೆಯೋದೆಲ್ಲವೂ ಅಗತ್ಯ ಸೇವೆಗೆ ಒಳಪಡಲಿದೆ. ಲಸಿಕೆ ಕೊಡುವುದನ್ನ ಮುಂದುವರೆಸುತ್ತೇವೆ. ರಿಜಿಸ್ಟರ್ ಮಾಡಿಕೊಂಡು ಕೊಡುತ್ತೇವೆ. ಲಸಿಕೆ ಒಂದೇ ನಮಗೆ ಕೊರೊನಾದಿಂದ ತಪ್ಪಿಸಿಕೊಳ್ಳಲು ಇರುವ ಉಪಾಯವಾಗಿದ್ದು, ಪ್ರತಿಯೊಬ್ಬರೂ ಎರಡು ಡೋಸ್ ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು.
18 ವರ್ಷ ಮೆಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬೇಕು. ಇಲ್ಲಿವರೆಗೂ ಲಸಿಕೆ ಕಡಿಮೆಯಾಗಿಲ್ಲ. ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಸಮಾನವಾಗಿ, ಜನಸಂಖ್ಯೆ ಆಧಾರದ ಮೇಲೆ ಲಸಿಕೆ ಪೂರೈಸುತ್ತಿದೆ. ರಾಜ್ಯ ಸರ್ಕಾರ ಕೇಂದ್ರದ ಲಸಿಕೆ ಪೂರೈಕೆಗೆ ಸಮಾನವಾಗಿ ಲಸಿಕೆ ನೀಡುತ್ತದೆ. ಲಸಿಕೆ ಪಡೆಯುವುದರಿಂದ ಭವಿಷ್ಯದಲ್ಲಿ ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಬಹುದು. ಹಾಗಾಗಿ ಲಸಿಕೆ ಬಗ್ಗೆ ಯಾವುದೇ ಅನುಮಾನ ಇಟ್ಟುಕೊಳ್ಳದೇ, ಎಲ್ಲರೂ ಲಸಿಕೆ ಪಡೆಯಬೇಕು ಎಂದರು.
ತಡರಾತ್ರಿ ಕೋಲಾರ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಕೋಲಾರದಲ್ಲಿ 40 ವೆಂಟಿಲೇಟರ್ ಬೆಡ್ ನೀಡಲಾಗಿತ್ತು. ಆಕ್ಸಿಜನ್ ಪೈಪ್‌ನಲ್ಲಿ ಸಮಸ್ಯೆಯಿದ್ದು, ಅದನ್ನ ಸರಿಪಡಿಸಬೇಕು. ಅದರಲ್ಲಿರೋ ಸಮಸ್ಯೆಯನ್ನ ಸರ್ಕಾರದ ಗಮನಕ್ಕೆ ತರಬೇಕಿತ್ತು. ಇದರಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ. ಹೀಗಾಗಿ, ಇಬ್ಬರು ಅಧಿಕಾರಿಗಳನ್ನ ರಾತ್ರಿಯೇ ಅಮಾನತು ಮಾಡಿದ್ದೇನೆ. ಕೋವಿಡ್ ವಾರ್ ರೂಮ್ನಲ್ಲಿ ಅಟೆಂಡರ್ ಬಿಟ್ಟಿದ್ದರು. ಎಲ್ಲರ ವಿರುದ್ಧ ಕ್ರಮ ಕೈಗೊಂಡಿದ್ದೇನೆ.
ಕೆಲ ವ್ಯವಸ್ಥೆಯಿಂದ ಎಲ್ಲರ ಮೇಲೆ ಅಪವಾದ ಬರುತ್ತಿದೆ. ವೈದ್ಯರ ಪರಿಶ್ರಮ ಎಷ್ಟೋ ಜನರ ಪ್ರಾಣ ಉಳಿಸುತ್ತಿದೆ. ಹಾಗಾಗಿ ಲೋಪಗಳಾಗದಂತೆ ಎಚ್ಚರಿಕೆ ಅಗತ್ಯ. ಅದೇ ರೀತಿಯಲ್ಲಿ ಜನರ ಸಹಕಾರವೂ ಮುಖ್ಯ, ಎಲ್ಲರೂ ಒಗ್ಗಟ್ಟಾಗಿ ಗೌರವಕ್ಕೆ ಪಾತ್ರರಾಗೋಣ ಎಂದರು.
ಓದಿ: ಸೈಯದ್ ಇಸಾಕ್ ಗ್ರಂಥಾಲಯಕ್ಕೆ 8,243 ಪುಸ್ತಕಗಳ ದಾನಕ್ಕೆ ಮುಂದಾದ ಸಚಿವ ಸುರೇಶ್ ಕುಮಾರ್!