ಬೆಂಗಳೂರು: ಮುಂದಿನ ದಿನಗಳಲ್ಲಿ ಕೊರೊನಾದಂತಹ ವ್ಯಾಧಿಗಳು, ಸಮುದಾಯಕ್ಕೆ ಕೇಡು ತರುವಂತಹ ವೈರಾಣುಗಳಿಂದ ಸಮುದಾಯದ ಆರೋಗ್ಯವನ್ನು ಉಳಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಆರೋಗ್ಯ ಸೇವೆಯಲ್ಲಿ ಇಡೀ ದೇಶದಲ್ಲೇ ಕರ್ನಾಟಕ ಮಾದರಿಯಾಗುವಂತೆ ಹೆಜ್ಜೆ ಇಡುತ್ತಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಕನ್ನಡಿಗನಿಗೂ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು. ಹೀಗಾಗಬೇಕಾದರೆ ನಮ್ಮ ಸಮುದಾಯದ ಆರೋಗ್ಯ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಹಾಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯ, ಆರೋಗ್ಯ ಸಿಬ್ಬಂದಿ ಹೊಸದಾಗಿ ನೇಮಕ ಮಾಡುವುದು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಕೂಲಂಕಶವಾಗಿ ಪ್ರಾತ್ಯಕ್ಷಿಕೆ ಮೂಲಕ ಮುಖ್ಯಮಂತ್ರಿಗಳಿಗೆ ನೀಡಲಾಗಿದೆ. ಕೇರಳ ಮತ್ತು ತಮಿಳುನಾಡು ಇಡೀ ದೇಶದಲ್ಲೇ ಉತ್ತಮ ಸಮುದಾಯದ ಆರೋಗ್ಯ ವ್ಯವಸ್ಥೆ ಹೊಂದಿವೆ ಎನ್ನುವ ಹೆಗ್ಗಳಿಕೆ ಪಡೆದಿವೆ. ದೇಶದಲ್ಲಿ ಕರ್ನಾಟಕದ ಆರೋಗ್ಯ ವ್ಯವಸ್ಥೆ ಉತ್ತಮವಾಗಿರಬೇಕು ಮತ್ತು ಇಡೀ ದೇಶಕ್ಕೆ ನಮ್ಮ ರಾಜ್ಯ ಮಾದರಿಯಾಗಬೇಕು ಎನ್ನುವ ಕನಸನ್ನು ಸಿಎಂ ಕಂಡಿದ್ದಾರೆ. ಆ ನಿಟ್ಟಿನಲ್ಲಿ ನಮಗೆ ನಿರ್ದೇಶನ ನೀಡಿದ್ದಾರೆ. ಅವರ ಕನಸಿಗೆ ಪೂರಕವಾಗಿ ಇಂದು ಮಾದರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದರು.
ರಾಜ್ಯದಲ್ಲಿ 2,380 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಎಲ್ಲದರ ಬಗ್ಗೆ ಸಿಎಂ ವಿವರವಾದ ಮಾಹಿತಿಯನ್ನು ಕಲೆಹಾಕಿದ್ದಾರೆ. 30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಎಲ್ಲಿಯಾದರೂ ಅಸಮತೋಲನ ಇದ್ದರೆ, ಹೊಸದಾಗಿ ಆರೋಗ್ಯ ಕೇಂದ್ರ ನಿರ್ಮಾಣ ಮಾಡಬೇಕು. ಆರೋಗ್ಯ ಕೇಂದ್ರದಲ್ಲಿನ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 6 ಹಾಸಿಗೆಯಿಂದ 12 ರಿಂದ 20 ಹಾಸಿಗೆಗೆ ಮೇಲ್ದರ್ಜೆಗೇರಿಸಬೇಕು. ಒಬ್ಬ ವೈದ್ಯರ ಬದಲು ಕನಿಷ್ಠ 3-4 ವೈದ್ಯರು ಇರಬೇಕು ನೋಡಿಕೊಳ್ಳಲಾಗುತ್ತದೆ. ಅದರಲ್ಲಿ ಒಬ್ಬರು ಮಹಿಳಾ ವೈದ್ಯರು, ಒಬ್ಬರು ಆಯುಷ್ ಇಲಾಖೆಯಿಂದ ವೈದ್ಯರು ನೇಮಕಗೊಂಡಿರುತ್ತಾರೆ ಎಂದರು.
ರಾಜ್ಯದ ಆರೋಗ್ಯ ಕೇಂದ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಲಿದೆ. ಯಾವ ರೀತಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇರಲಿದೆ ಎನ್ನುವುದನ್ನು ಸಮೀಕ್ಷೆ ಮೂಲಕ ತೋರಿಸಲಾಗಿದೆ. ಉತ್ತಮವಾದ ಮೂಲಭೂತ ಸೌಕರ್ಯ ಇಲ್ಲದಿರುವುದು. ಉತ್ತಮ ವಸತಿಯನ್ನು ಕಲ್ಪಿಸದಿರುವುದೇ ವೈದ್ಯರು ಗ್ರಾಮೀಣ ಪ್ರದೇಶಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಇದನ್ನೆಲ್ಲ ಚಿಂತನೆ ಮಾಡಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ವೈದ್ಯರಿಗೆ, ಶುಶ್ರೂಷಕರಿಗೆ, ಇತರ ಆರೋಗ್ಯ ಸಿಬ್ಬಂದಿಗೂ ಉತ್ತಮ ಗುಣಮಟ್ಟದ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎರಡು ಎಕರೆ ಪ್ರದೇಶದಲ್ಲಿ ಕನಿಷ್ಠ 6 ರಿಂದ 8 ಕೋಟಿ ವೆಚ್ಚದಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ತಲೆ ಎತ್ತಲಿವೆ. ಇದರಲ್ಲಿ ತಾಯಿ ಮಕ್ಕಳ ವಿಭಾಗ ಇರುತ್ತದೆ. 6 ಮಹಿಳಾ ಆರು ಪುರುಷ ವಾರ್ಡ್ಗಳು, ಒಂದು ಲ್ಯಾಬೋರೇಟರಿ ಇರಲಿದೆ ಎಂದರು.
ಪ್ರತಿಯೊಬ್ಬ ಬಡವನಿಗೂ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ರಕ್ತದ ಮಾದರಿ, ಮಧುಮೇಹದಂತಹ ಪರೀಕ್ಷೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಲು ಅವಕಾಶ ಸಿಕ್ಕಬೇಕು ಎನ್ನುವುದು ನಮ್ಮ ಉದ್ದೇಶ. ರಾಷ್ಟ್ರೀಯ ಆರೋಗ್ಯ ಯೋಜನೆಯಿಂದ ಬರುವ ಅನುದಾನದಲ್ಲಿ ಈ ದರಗಳನ್ನು ಸರ್ಕಾರವೇ ನಿಭಾಯಿಸಲಿದೆ. 40 ವರ್ಷ ದಾಟಿದ ಗ್ರಾಮೀಣ ಜನರು ಕಡ್ಡಾಯವಾಗಿ ರಕ್ತದ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸಿಕೊಳ್ಳಬೇಕು ಮಹಿಳೆಯರು ಕೂಡ ಮಹಿಳೆಯರಿಗೆ ಸೀಮಿತವಾಗಿರುವ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಅದಕ್ಕೆ ಪೂರಕ ವ್ಯವಸ್ಥೆ ನಮ್ಮ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇರಲಿವೆ. ಭವಿಷ್ಯದ 5-10 ವರ್ಷದಲ್ಲಿ ವ್ಯಕ್ತಿಗೆ ಹೃದಯಾಘಾತ ಸಂಭವಿಸುವ ಸಾಧ್ಯತೆಯನ್ನು ಮೊದಲೇ ಗುರುತಿಸುವ ಕೆಲಸವನ್ನು ಮಾಡಬೇಕಾಗಲಿದೆ. ಅದಕ್ಕೆ ಪೂರಕವಾಗಿ ಮಾದರಿ ಆರೋಗ್ಯ ಕೇಂದ್ರ ವೈದ್ಯಕೀಯ ಸೇವೆ ನೀಡಲಿದೆ ಎಂದರು.
ಇ- ಆಸ್ಪತ್ರೆ ವ್ಯವಸ್ಥೆ: ಇ-ಆಸ್ಪತ್ರೆ ವ್ಯವಸ್ಥೆಯನ್ನು ಹೊಸ ವ್ಯವಸ್ಥೆ ಹೊಂದಿರಲಿದೆ. ಆಸ್ಪತ್ರೆಗಳು ಪ್ರಾಥಮಿಕ ಆಸ್ಪತ್ರೆಗಳಿಂದ ಹಿಡಿದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ವರೆಗೂ ಇಂಟರ್ನೆಟ್ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಸಣ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ಎಕ್ಸ್ ರೇ ತೆಗೆದರೆ ಅದಕ್ಕೆ ಬೇಕಾದ ವೈದ್ಯಕೀಯ ಸಲಹೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇರುವ ಪರಿಣಿತ ವೈದ್ಯರು ವರದಿ ನೋಡಿ ಚಿಕಿತ್ಸಾ ಮಾರ್ಗದರ್ಶನ ನೀಡುವ ಕೆಲಸ ಆಗಲಿದೆ ಎಂದರು.
ಎಲ್ಲಾ ಆಸ್ಪತ್ರೆ ಮೇಲ್ದರ್ಜೆಗೆ: ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಜಿಲ್ಲಾಸ್ಪತ್ರೆಗಳಲ್ಲಿ ಟ್ರಾಮಾ ಸೆಂಟರ್ ಕಡ್ಡಾಯವಾಗಿ ಇರಬೇಕು. ಕಾರ್ಡಿಯಾಲಜಿ ವಿಭಾಗ, ಕ್ಯಾನ್ಸರ್ ವಿಭಾಗ ಇರಬೇಕು. ಕೇವಲ ಬೆಂಗಳೂರು ಕೇಂದ್ರಿತವಾಗಿ ಆರೋಗ್ಯ ಸೇವೆಗಳು ಸೀಮಿತವಾಗಬಾರದು. ರಾಜ್ಯದ ಎಲ್ಲಾ ಭಾಗದ ಜನರು ಈ ಎರಡು ನಗರಗಳಿಗೆ ಬರುವುದನ್ನು ತಪ್ಪಿಸಿ, ಆಯಾ ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಸಿಗಬೇಕು. ಪ್ರಾಥಮಿಕದಿಂದ ತೃತೀಯ ಮಟ್ಟದ ಚಿಕಿತ್ಸೆಗಳು ಸಿಗಬೇಕು ಎನ್ನುವ ನಮ್ಮ ಸರ್ಕಾರದ ಕಾಯಕಲ್ಪವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಮುಖ್ಯಮಂತ್ರಿಗಳು ಹೊರಟಿದ್ದಾರೆ. ಇದಕ್ಕೆ ಈ ವರ್ಷದ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಹೆಚ್ಚಿನ ಆದ್ಯತೆ ಕೊಡಲಿದ್ದಾರೆ ಎಂದರು.
ಕರ್ನಾಟಕ ಮಾದರಿ: ಮುಂದಿನ ದಿನಗಳಲ್ಲಿ ಕೊರೊನಾದಂತಹ ವ್ಯಾದಿಗಳು, ಸಮುದಾಯಕ್ಕೆ ಕೇಡು ತರುವಂತಹ ವೈರಾಣುಗಳಿಂದ ಸಮುದಾಯದ ಆರೋಗ್ಯವನ್ನು ಉಳಿಸಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ಬಡವರಿಗೆ ಉಚಿತವಾಗಿ ಆರೋಗ್ಯ ಸೇವೆಗಳು ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಗಳು ಅಭಿವೃದ್ಧಿ ಆಗಲಿವೆ. ದೇಶಕ್ಕೆ ಕರ್ನಾಟಕ ಒಂದು ಮಾದರಿಯಾಗಲಿದೆ ಎಂದು ಮುಖ್ಯಮಂತ್ರಿಗಳು ಕನಸು ಕಂಡಿದ್ದಾರೆ. ಅದನ್ನು ನನಸು ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.
ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಆ್ಯಂಬುಲೆನ್ಸ್: ಪ್ರತಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಇನ್ಮುಂದೆ ಒಂದು ಅಂಬುಲೆನ್ಸ್ ಅನ್ನು ನೀಡಲಾಗುತ್ತದೆ. ಇಲ್ಲಿಯವರೆಗೂ ಒಂದರಿಂದ ಒಂದುವರೆ ಲಕ್ಷ ಜನಸಂಖ್ಯೆಗೆ ಒಂದು ಆಂಬುಲೆನ್ಸ್ ಕೊಡಲಾಗುತ್ತಿತ್ತು. ಇನ್ಮುಂದೆ ಆಯಾ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಒಂದು ಆಂಬುಲೆನ್ಸ್ ಇರಲಿದೆ. 30 ಸಾವಿರ ಜನಸಂಖ್ಯೆಗೆ ಒಂದು ಆಂಬುಲೆನ್ಸ್ ಸೇವೆ ಇನ್ಮುಂದೆ ಸಿಗಲಿದೆ. ಇಡೀ ದೇಶದಲ್ಲಿ ತಮಿಳುನಾಡು-ಕೇರಳ ಉತ್ತಮ ಸೇವೆ ಕೊಡುತ್ತೇವೆ ಎಂದು ದೇಶದಲ್ಲಿ ಪ್ರಸಿದ್ಧಿಯಾಗಿವೆ. ಅದಕ್ಕೂ ಮುಂದುವರೆದು ಕರ್ನಾಟಕ ರಾಜ್ಯ ಮಾದರಿ ಆರೋಗ್ಯ ಸೇವೆಗಳಿಗೆ ಒಂದು ಧಾಮ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.