ಬೆಂಗಳೂರು: ತಿಳಿಗೇಡಿ ಯುವಕನ ಪ್ರಚೋದನಾತ್ಮಕ ಪೋಸ್ಟ್‌ನಿಂದ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ, ಕಿಡಿಗೇಡಿಗಳ ಜತೆಗೆ ಕೆಲ ಅಮಾಯಕರನ್ನೂ ಪೊಲೀಸರು ಬಂಧಿಸಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಉದ್ರಿಕ್ತ ಮತಿಗೇಡಿ ಯುವಕರು ಎಸಗಿದ ಕೃತ್ಯಕ್ಕೆ ಸಂಬಂಧವಿಲ್ಲದವರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೆಲ ಕುಟುಂಬಗಳ ತಂದೆ-ತಾಯಂದಿರು ನನಗೆ ನಿರಂತರವಾಗಿ ಮೊಬೈಲ್ ಕರೆ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಜತೆ ಮಾತನಾಡಿದ್ದೇನೆ. ಪೊಲೀಸ್ ಠಾಣೆ, ಆಸ್ಪತ್ರೆ, ದೇವಾಲಯದ ಮೇಲೆ ಕಲ್ಲು ಹೊಡೆದವರನ್ನು ಬಿಡಬೇಡಿ, ಅಮಾಯಕರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಆ ದೃಶ್ಯಗಳಲ್ಲಿ ಇಲ್ಲದವರನ್ನು ಬಿಟ್ಟು ಕಳಿಸಲಾಗುವುದು ಎಂದು ಪೊಲೀಸ್ ಆಯುಕ್ತರು ನನಗೆ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಗಲಾಟೆಗೆ ಸಂಬಂಧವಿಲ್ಲದ ಮುಗ್ಧರಿಗೆ ತೊಂದರೆ ಆಗುವುದು ಬೇಡ. ಅಂಜುಮನ್ ಸಂಸ್ಥೆ ಮುಖಂಡರ ಜತೆ ತೆರಳಿ ಪೊಲೀಸರಿಗೆ ಮನವಿ ಕೊಡಿ ಎಂದು ಈಗಾಗಲೇ ನಮ್ಮ ಪಕ್ಷದ ಮುಖಂಡರಿಗೂ ಸೂಚಿಸಿದ್ದೇನೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮುಗ್ಧರಿಗೆ ಅನ್ಯಾಯ ಆಗದಿರಲಿ ಎನ್ನುವುದು ನನ್ನ ಮನವಿ ಎಂದಿದ್ದಾರೆ. ಹುಬ್ಬಳ್ಳಿ ಸದಾ ಶಾಂತಿಯನ್ನು ಬಯಸುವ ನಗರ. ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯುಳ್ಳ ತಾಣ. ಕೆಲ ವರ್ಷಗಳಿಂದ ಇಲ್ಲಿ ಎಲ್ಲ ಸಮುದಾಯದವರು ಸಹೋದರರಾಗಿ ಬಾಳಿ ಬದುಕುತ್ತಿದ್ದಾರೆ. ಬವಣೆಯಲ್ಲಿ ಬೇಯುತ್ತಿರುವ ಬದುಕನ್ನು ಕಟ್ಟಿಕೊಳ್ಳುವ ಬದಲು ಕೋಮುದಳ್ಳುರಿ ಹರಡುವುದು ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪ್ರಕರಣ : ಕಠಿಣ ಕ್ರಮಕ್ಕೆ ನಳಿನ್‍ಕುಮಾರ್ ಕಟೀಲ್ ಮನವಿ