ಬೆಂಗಳೂರು: ಸಾರಿಗೆ ನೌಕರರ ಮುಷ್ಕರವನ್ನು ಹಿಂಸಾಚಾರದ ಹಂತಕ್ಕೆ ಬೆಳೆಯಲು ಬಿಟ್ಟ ಸರ್ಕಾರದ ನಡೆಯಲ್ಲಿ ನಿರ್ಲಕ್ಷ್ಯತೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜಮಖಂಡಿ ದುರ್ಘಟನೆಯಲ್ಲಿ ಮೃತಪಟ್ಟ ಬಸ್ ಚಾಲಕ ನಬಿ ರಸೂಲ್ ಸರ್ಕಾರದ ಕರೆಗೆ ಓಗೊಟ್ಟು ಕರ್ತವ್ಯಕ್ಕೆ ಬಂದಿದ್ದವರು. ಹೀಗಾಗಿ ಅವರ ಕುಟುಂಬಕ್ಕೆ ಸರ್ಕಾರ ಗರಿಷ್ಠ ಪರಿಹಾರ ಒದಗಿಸಬೇಕು. ಕೃತ್ಯ ಎಸಗಿದವರಿಗೆ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೌಕರರ ಬೇಡಿಕೆ ಒಂದು ಕಡೆ ಇರಲಿ. ಅದಕ್ಕೂ ಮೊದಲು ನೌಕರರಲ್ಲೂ ಈಗ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಮುಷ್ಕರ ಲೆಕ್ಕಿಸದೇ ಜನರ ಸೇವೆಗಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ವಾಯುವ್ಯ ಸಾರಿಗೆ ಸಂಸ್ಥೆ ಬಸ್ ಚಾಲಕ ನಬಿ ರಸೂಲ್ ಆವಟಿ ಅವರನ್ನು ಜಮಖಂಡಿಯಲ್ಲಿ ಕಲ್ಲಿನಿಂದ ಹೊಡೆದು ಕೊಂದ ಘಟನೆ ನನ್ನನ್ನು ದಿಗ್ಭ್ರಾಂತನನ್ನಾಗಿಸಿದೆ. ಪ್ರತಿಭಟನೆ ಎತ್ತ ಸಾಗುತ್ತಿದೆ? ಸರ್ಕಾರ ಏನು ಮಾಡುತ್ತಿದೆ? ಎಂಬ ಪ್ರಶ್ನೆಗಳು ನನ್ನನ್ನು ತೀವ್ರವಾಗಿ ಕಾಡಿವೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಜಮಖಂಡಿಯ ಈ ದುರ್ಘಟನೆ ಯಾವ ಸಂದೇಶ ನೀಡುತ್ತಿದೆ ಎಂಬುದರತ್ತ ಸರ್ಕಾರ ಗಂಭೀರವಾಗಿ ಯೋಚಿಸಲಿ. ಅನಿವಾರ್ಯ ಸಂದರ್ಭದಲ್ಲಿ ಜನರಿಗೆ ಸೇವೆ ನೀಡಲು ಇನ್ನು ಮುಂದೆ ಯಾವ ನೌಕರ ಮುಂದೆ ಬರುತ್ತಾನೆ ಎಂಬುದರ ಬಗ್ಗೆ ಚಿಂತನೆ ಮಾಡಲಿ ಎಂದು ಸಲಹೆ ಮಾಡಿದ್ದಾರೆ.
ಬಸ್‍ಗಳ ಮೇಲೆ ನಡೆಯುತ್ತಿರುವ ಪ್ರಸಂಗಗಳನ್ನು ಗಮನಿಸಿದ್ದೇನೆ. ಅಂಥವರನ್ನು ಕೂಡಲೇ ಬಂಧಿಸಬೇಕು. ನೌಕರರು ಈ ಕೃತ್ಯ ಮಾಡಿರಲಾರರು. ನೌಕರರ ಹೋರಾಟ ಸರ್ಕಾರದ ವಿರುದ್ಧವೇ ಹೊರತು ಅನ್ನ ನೀಡುವ ಬಸ್‍ಗಳ ವಿರುದ್ಧ ಅಲ್ಲ ಎಂಬ ನಂಬಿಕೆ ನನಗಿದೆ. ಮುಷ್ಕರ ಹಿಂಸೆ ರೂಪ ಪಡೆಯಬಾರದು. ಇಲ್ಲಿ ಯಾರ ಹಟವೂ ಗೆಲ್ಲದಿರಲಿ. ನಾಗರಿಕರಿಗೆ ಹಿತವಾಗಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೆಚ್ಡಿಕೆ ಬೆನ್ನಲ್ಲೇ ನಿಖಿಲ್ ಕುಮಾರಸ್ವಾಮಿಗೂ ತಗುಲಿದ ಕೊರೊನಾ