ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಆಪ್ತರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ತನಿಖೆ ನಡೆಸಲು ಸಿಬಿಐಗೆ ಆದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಮತ್ತು ಆಪ್ತರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಟಿ.ಜೆ ಅಬ್ರಹಾಂ, ಈ ಕುರಿತು ತನಿಖೆ ನಡೆಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಸಿಎಂ ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರಿಂದ ಪೂರ್ವಾನುಮತಿ ಪಡೆದಿಲ್ಲ ಎಂಬ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಅರ್ಜಿ ವಜಾ ಮಾಡಿತ್ತು. ವಿಶೇಷ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಅಬ್ರಹಾಂ ಹೈಕೋರ್ಟ್ಗೆ ರಿಟ್ (ಪಿಐಎಲ್) ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರು ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಅರ್ಜಿ ಸಲ್ಲಿಸಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿತ್ತಲ್ಲದೇ, ಅರ್ಜಿ ಮಾರ್ಪಡಿಸಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ರಿಟ್ ಅರ್ಜಿ ಏಕಸದಸ್ಯ ಪೀಠಕ್ಕೆ ವರ್ಗಾವಣೆಯಾಗಿತ್ತು.
ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾ. ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಅರ್ಜಿಯಲ್ಲಿ ತಾಂತ್ರಿಕ ಸಮಸ್ಯೆಗಳಿದ್ದ ಕಾರಣಕ್ಕಾಗಿ ಅದನ್ನು ಹಿಂಪಡೆಯುವುದಾಗಿ ಅರ್ಜಿದಾರರು ಕೋರಿದ ಹಿನ್ನೆಲೆಯಲ್ಲಿ ಪೀಠ ಆ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಇದೇ ವಿಚಾರವಾಗಿ ದೂರುದಾರ ಟಿ.ಜೆ ಅಬ್ರಹಾಂ ಹೈಕೋರ್ಟ್ಗೆ ಮತ್ತೊಂದು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾ, ಸುನಿಲ್ ದತ್ ಯಾದವ್ ಅವರಿದ್ದ ಪೀಠ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 17ಕ್ಕೆ ವಿಚಾರಣೆ ನಿಗದಿಪಡಿಸಿದೆ.