ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಮುಂದಿನ ಮೂರು ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಸೂಚಿಸಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಸಂಘಕ್ಕೆ ಚುನಾವಣೆ ನಡೆಸಲು ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಸಂಘದ ಪದಾಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಹಿಂದಿನ ಕಾರ್ಯಕಾರಿ ಸಮಿತಿಯನ್ನು ಪದಚ್ಯುತಿಗೊಳಿಸಲಾಗಿತ್ತು. ಬಳಿಕ ಸರ್ಕಾರ, ಸಂಘಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಶಂಕರಲಿಂಗೇಗೌಡ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು. ನಿಯಮಗಳ ಪ್ರಕಾರ 6 ತಿಂಗಳಿಗಿಂತ ಹೆಚ್ಚಿನ ಅವಧಿಗೆ ಆಡಳಿತಾಧಿಕಾರಿ ನೇಮಿಸುವಂತಿಲ್ಲ. ಆದರೂ, ಕಳೆದ ಎರಡೂವರೆ ವರ್ಷದಿಂದ ಆಡಳಿತಾಧಿಕಾರಿ ಅವಧಿ ವಿಸ್ತರಿಸಿಕೊಂಡು ಬರಲಾಗುತ್ತಿದೆ. ಆದ್ದರಿಂದ ಸಂಘಕ್ಕೆ ಚುನಾವಣೆ ನಡೆಸುವಂತೆ ನಿರ್ದೇಶಿಸಬೇಕು ಎಂದು ಕೋರಿದರು.
ಇದನ್ನೂ ಓದಿ: ನನಗೆ ಸಿಡಿ ಕೊಟ್ಟಿದ್ದು ಸಂತ್ರಸ್ತೆ ಕುಟುಂಬಸ್ಥರು: ದಿನೇಶ್ ಕಲ್ಲಹಳ್ಳಿ
ವಕೀಲರ ವಾದ ಪರಿಗಣಿಸಿದ ಪೀಠ, ನಿಯಮಾನುಸಾರ 6 ತಿಂಗಳಿಗಿಂತ ಹೆಚ್ಚಿನ ಅವಧಿಗೆ ಆಡಳಿತಾಧಿಕಾರಿ ವಿಸ್ತರಿಸುವಂತಿಲ್ಲ. ಆದರೆ, ಈ ಪ್ರಕರಣದಲ್ಲಿ ಆಡಳಿತಾಧಿಕಾರಿ ಅವಧಿ ವಿಸ್ತರಿಸಿಕೊಂಡು ಬರಲಾಗಿದೆ. ಆದ್ದರಿಂದ, ಸಂಘಕ್ಕೆ ಚುನಾವಣೆ ನಡೆಸುವುದು ಅಗತ್ಯವಾಗಿದೆ. ಹೀಗಾಗಿ, ಮುಂದಿನ ಮೂರು ತಿಂಗಳಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.