ಬೆಂಗಳೂರು : ಬಜೆಟ್ ಬಗೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಅವರು, ಬೊಮ್ಮಾಯಿಯವರ ಚೊಚ್ಚಲ ಮಗು ಚೆನ್ನಾಗಿದೆ, ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದು ಎಲ್ಲರನ್ನೂ ಸ್ಪರ್ಶ ಮಾಡಿದ ಬಜೆಟ್ ಆಗಿದೆ. ನಮ್ಮ ಬಳಿ ಇದ್ದಾಗ ನಗುತ್ತದೆ, ಪ್ರತಿಪಕ್ಷಗಳ ಬಳಿ ಬಂದಾಗ ಕಿಟಾರನೇ ಕಿರುಚುತ್ತದೆ. ಎಷ್ಟಾದರೂ ಬಜೆಟ್ ಉತ್ತಮವಾಗಿದೆ. ರಾಜ್ಯದಲ್ಲಿ ಒಟ್ಟು 33 ಇಲಾಖೆ ಇದೆ.
ಇದರಲ್ಲಿ ಹಣಕಾಸು, ಡಿಪಿಆರ್ ಹಾಗೂ ಕಾನೂನು ಪ್ರಮುಖವಾದದು. ಸದ್ಯ ಪ್ರಮುಖ ಎರಡು ಇಲಾಖೆ ಸಿಎಂ ಬಳಿ ಇವೆ. ಇದನ್ನು ನಿಭಾಯಿಸುವ ಶಕ್ತಿ ಸಿಎಂ ಬಳಿ ಇದ್ದರೂ, ನಿಭಾಯಿಸಲು ಸಮಯ ಎಲ್ಲಿದೆ? ಸಂಪನ್ಮೂಲ ಕೊರತೆ ಇರುವಾಗ ಯಾರಿಂದ ತಾನೆ ಸಾಧನೆ ಮಾಡಲು ಸಾಧ್ಯ. ಸೈಬರ್ ನಾಯಕ ಎಸ್.ಎಂ. ಕೃಷ್ಣ ಒಬ್ಬರೇ ಸಂಪನ್ಮೂಲ ತಂದರು ಎಂದು ಹೇಳಿದ್ದಾರೆ.
ಇಂದು ವರ್ಗಾವಣೆ ದಂಧೆ ನಡೆಯುತ್ತಿದೆ. ಇದು ಆಡಳಿತ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ಗುಂಡೂರಾವ್ ಅವಧಿಯಲ್ಲಿ ಬಿಗಿಯಾದ ಆಡಳಿತ ಇತ್ತು. ಆದರೆ, ಈಗ ಎಲ್ಲಾ ಬದಲಾಗಿದೆ. ಕೇಂದ್ರೀಯ ಆಡಳಿತ ವ್ಯವಸ್ಥೆಯನ್ನು ವಿರೋಧಿಸಿ ನಾನು, ದೇವೇಗೌಡರು ಪ್ರಧಾನಿಗೆ ಪತ್ರ ಬರೆದಿದ್ದೆವು.
ತೆರಿಗೆ ವಿಚಾರದಲ್ಲಿ ಆಗುವ ಅಸಮಾನತೆ ಸರಿಯಾಗಬೇಕು. ಜಿಎಸ್ಟಿ ವಿಚಾರದಲ್ಲಿ ಗೊಂದಲ ಇದೆ. ಸುದೀರ್ಘ ಅವಧಿ ಒಬ್ಬ ಅಧಿಕಾರಿ ಒಂದೇ ಸ್ಥಾನದಲ್ಲಿ ಇದ್ದರೆ ಕಷ್ಟ. ಇಡೀ ವ್ಯವಸ್ಥೆ ಮರು ಹೊಂದಾಣಿಕೆ ಆಗಬೇಕು. ಬಜೆಟ್ ಅಧಿವೇಶನ ಸಂದರ್ಭ ಸಂಬಂಧಿಸಿದ ಹಣಕಾಸು ಇಲಾಖೆ ಅಧಿಕಾರಿ ಇರಬೇಕು.
ತೆರಿಗೆ ಸಂಗ್ರಹ ಲೋಪದ ಮಾಹಿತಿ ನಮೂದು ಮಾಡಿದ್ದೀರಾ? ಅಧಿಕಾರಶಾಹಿ ಆಡಳಿತ ನಡೆಯುತ್ತಿದೆ. ದೇವರಾಜ್ ಅರಸು ಅವಧಿಯಲ್ಲಿ ಒಂದು ಚೀಟಿಯಲ್ಲಿ ಬರೆದು ಕಳಿಸಿದರೆ, ಅದು ಆದೇಶ ಆಗುತ್ತಿತ್ತು. ಆದರೆ, ಇಂದು ಎಂತಹ ಸ್ಥಿತಿ ಬಂತು?! ಆಡಳಿತ ಬಿಗಿ ತಂದ ಮುಖ್ಯಮಂತ್ರಿ ಕಂಡಿದ್ದೆವು.
ಆದರೆ, ಇಂದು ಸ್ಥಿತಿ ಏನಾಗಿದೆ ಎಂದರೆ ನನ್ನನ್ನು ಮತ್ತೆ ಮುಖ್ಯಮಂತ್ರಿ ಮಾಡಿ 10 ಕೆಜಿ ಅಕ್ಕಿ ಕೊಡುತ್ತೇನೆ ಎನ್ನುತ್ತಾರೆ. 13 ಸಾರಿ ಬಜೆಟ್ ಮಂಡಿಸಿದವರು ಹೇಳುವ ಮಾತೇ ಇದು? ಆಡಳಿತ ಸುಧಾರಣೆ ಮಾತು ಬರಬೇಕಲ್ಲವಾ ಅಂತಾ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೇ ಲೇವಡಿ ಮಾಡಿದರು.
ಹಿಂದೆ ಸಿಎಂ ಆಗಿದ್ದವರು ದೇಶದ ಪ್ರಧಾನಿಯನ್ನು ಏಯ್ ಮೋದಿ ಎಂದು ಸಂಬೋಧಿಸುವುದು ಎಷ್ಟು ಸರಿ?. ಒಂದು ಬಾರಿ ಸಿಎಂ ಆಗಿ ಆಯ್ಕೆಯಾಗಿ ಮತ್ತೆ ಗೆಲ್ಲಲಾಗದವರು ಮೋದಿ ಬಗ್ಗೆ ಮಾತನಾಡುವುದು ಸರಿಯಲ್ಲ. ಮನಮೋಹನ್ ಸಿಂಗ್, ಇಂದಿರಾಗಾಂಧಿ, ಕೆಂಗಲ್ ಹನುಮಂತಯ್ಯನಂತವರು ಮತ್ತೆ ಹುಟ್ಟುತ್ತಾರೋ ಇಲ್ಲವೋ ಗೊತ್ತಿಲ್ಲ.
ಇಂತಹ ನಾಯಕರು ನಮಗೆ ಮತ್ತೆ ಸಿಗಲ್ಲ. ನರೇಂದ್ರ ಮೋದಿ ದೇಶದಲ್ಲಿ ಎರಡನೇ ಬಾರಿ ಪ್ರಧಾನಿಯಾಗಿದ್ದು,ಜಾತಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿಲ್ಲ. ಒಮ್ಮೆಯೂ ಹಿಂದುತ್ವದ ಮಾತನ್ನು ಆಡಿಲ್ಲ. ಉತ್ತಮ ಆಡಳಿತ ನೀಡಿದ್ದಾರೆ ಎಂದು ಹೇಳಿದ್ದಾರೆ. ಮೋದಿ ಬಣ್ಣನೆ ಮಾಡಿದ್ದನ್ನು ಕಾಂಗ್ರೆಸ್ ನಾಯಕರು ವಿರೋಧಿಸಿದರು.
ಎರಡು ಕೋಟಿ ಉದ್ಯೋಗ ನೀಡಿಲ್ಲ. ತಾರತಮ್ಯ ಮಾಡಿದ್ದಾರೆ ಎಂದರು. ಯಾವುದೇ ವಿಚಾರವನ್ನು ರಾಜಕೀಯಕ್ಕೆ ಬಳಸಬೇಡಿ. ಸಿಎಂ ತಮ್ಮ ಬಜೆಟ್ ನಲ್ಲಿ ಸಾಕಷ್ಟು ದೊಡ್ಡ ಯೋಜನೆಯನ್ನು ಘೋಷಿಸಿದ್ದಾರೆ. ಜಲ ಜೀವನ್ ಮಿಷನ್ ಘೋಷಿಸಿದ್ದಾರೆ. 95 ಲಕ್ಷ ಗ್ರಾಮಗಳಿಗೆ ನೀರು ಕೊಡಿಸುವ ಮಹತ್ವದ ಯೋಜನೆಯನ್ನು ಯಾರೂ ಪ್ರಸ್ತಾಪಿಸಿಲ್ಲ.
ಈ ದೊಡ್ಡ ಕಾರ್ಯಕ್ರಮವನ್ನು ಖುದ್ದು ಸಿಎಂ ಕೈಗೆತ್ತಿಕೊಳ್ಳಬೇಕು. ಒಬ್ಬ ಇಲಾಖೆ ಸಚಿವರಿಗೆ ಬಿಡಬಾರದು. ವಿವಿಧ ಇಲಾಖೆ ಸಚಿವರನ್ನು ಒಳಗೊಂಡು ಕಾರ್ಯಕ್ರಮ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಆಡಳಿತ ಸುಗಮ ವ್ಯವಸ್ಥೆಗೆ ಪ್ರತ್ಯೇಕ ಅಧಿವೇಶನ ಕರೆಯಿರಿ. ಪ್ರಶ್ನೋತ್ತರ ಅವಧಿ ಹೊರತುಪಡಿಸಿ ಉಳಿದ ವಿಚಾರ ಬಿಟ್ಟು ಬೇರೆ ಚರ್ಚೆ ಮಾಡುವುದು ಬೇಡ. ಕೇವಲ ರಾಜ್ಯ ಹೇಗೆ ಮುಂದುವರಿಸಬೇಕೆಂಬ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ. ವಿಶೇಷ ಅಧಿವೇಶನ ಕರೆಯುವ ಮೂಲಕ ಮಹತ್ವದ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಓದಿ : ಹಿಜಾಬ್ ತೀರ್ಪು : ಪರೀಕ್ಷೆ ಧಿಕ್ಕರಿಸಿ ಮನೆಯತ್ತ ಸಾಗಿದ ಮುಸ್ಲಿಂ ವಿದ್ಯಾರ್ಥಿನಿಯರು