ಬೆಂಗಳೂರು : ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್ನ್ನು ಜಿಲ್ಲಾವಾರು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲು ಸೂಕ್ತ ಮಾರ್ಗಸೂಚಿ ರೂಪಿಸಿ. ಹಾಗೆಯೇ ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿದಂತೆ ಸಹಾಯವಾಣಿ ರೂಪಿಸಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ 28 ಪಿಎಸ್ಎ ಆಕ್ಸಿಜನ್ ಘಟಕ ಸ್ಥಾಪನೆಗೆ ಕೇಂದ್ರ ಅನುಮತಿ ನೀಡಿದೆ. ಈ ಘಟಕಗಳು ಪ್ರತಿ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದಿಸಲಿವೆ. ರಾಜ್ಯ ಸರ್ಕಾರದ ವತಿಯಿಂದಲೂ 40 ಪಿಎಸ್ಎ ಘಟಕಗಳನ್ನು ಸ್ಥಾಪಿಸಲಾಗುವುದು. ಮೇ 15ರ ಒಳಗೆ 6ರಿಂದ 10 ಘಟಕಗಳು ಕಾರ್ಯಾರಂಭಗೊಳ್ಳಲಿವೆ. ಮೇ ಅಂತ್ಯದೊಳಗೆ ಉಳಿದೆಲ್ಲ ಘಟಕಗಳ ಕಾರ್ಯಾಚರಣೆ ಆರಂಭವಾಗಲಿದೆ. ಕೇಂದ್ರದಿಂದ ರಾಜ್ಯಕ್ಕೆ ಹಂಚಿಕೆಯಾಗಿರುವ ಹೆಚ್ಚುವರಿ 100 ಮೆ.ಟನ್ ಆಕ್ಸಿಜನ್‌ನಲ್ಲಿ ಬಳ್ಳಾರಿಯಿಂದ 60 ಮೆ.ಟನ್ ಹಾಗೂ ಒರಿಸ್ಸಾದ ಕಳಿಂಗದಿಂದ 40 ಮೆಟ್ರಿಕ್ ಟನ್ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ರಾಜ್ಯದಲ್ಲಿ ಜಿಲ್ಲೆಗಳ ನಡುವೆ ಆಕ್ಸಿಜನ್ ಹಂಚಿಕೆ ಮಾಡಲು ಮಾರ್ಗಸೂಚಿ ರೂಪಿಸಿ. ಆಕ್ಸಿಜನ್ ನೆರವಿಗಾಗಿ ಎಲ್ಲ ಆಸ್ಪತ್ರೆಗಳಲ್ಲೂ ಸಹಾಯವಾಣಿ ಸ್ಥಾಪಿಸಿ. ಆಕ್ಸಿಜನ್ ಎಲ್ಲಿ ಸಿಗುತ್ತದೆ, ಎಲ್ಲಿಗೆ ಬೇಡಿಕೆಯಿದೆ, ಆಕ್ಸಿಜನ್ ಪೂರೈಕೆ ಎಷ್ಟು, ಬೇಡಿಕೆ ಎಷ್ಟು ಎಂಬ ಅಂಕಿ ಅಂಶಗಳನ್ನು ಸಂಗ್ರಹಿಸಿ. ಈ ಮಾಹಿತಿ ರಿಯಲ್ ಟೈಮ್ ನಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಿ. ಒಟ್ಟಾರೆ ಆಕ್ಸಿಜನ್ ಕೊರತೆಯಾಗದಂತೆ ನಿರ್ವಹಣೆ ಮಾಡಲು ಕೇಂದ್ರೀಕೃತ ಮಾಹಿತಿ ವ್ಯವಸ್ಥೆ ರೂಪಿಸಿ ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮೇ.11ಕ್ಕೆ ಮುಂದೂಡಿತು.