ಬೆಂಗಳೂರು: ದಿವಂಗತ ನಟ ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನವನ್ನು ಮಲ್ಲೇಶ್ವರದ ಸುಬ್ರಹ್ಮಣ್ಯ ನಗರದಲ್ಲಿರುವ ಕೆಂಪೇಗೌಡ ಆಟದ ಮೈದಾನ ಮತ್ತು ಸಂಗೊಳ್ಳಿ ರಾಯಣ್ಣ ಉದ್ಯಾನಗಳಲ್ಲಿ ಸ್ಥಳೀಯ ಬಿಜೆಪಿ ಮಂಡಲ ಕೇಕ್ ಕತ್ತರಿಸಿ, ಉಪಾಹಾರ ವಿತರಿಸಿ ಸಂಭ್ರಮದಿಂದ ಆಚರಿಸಿದೆ.
ಪುನೀತ್ ಹುಟ್ಟುಹಬ್ಬದ ನಿಮಿತ್ತ ಕೇಕ್ ಕತ್ತರಿಸಿ ಮಾತನಾಡಿದ ಸ್ಥಳೀಯ ಶಾಸಕ ಮತ್ತು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಪುನೀತ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದರೂ ಎಲ್ಲೂ ಹೇಳಿಕೊಳ್ಳದ ಸಂಕೋಚ ಸ್ವಭಾವದ ವ್ಯಕ್ತಿಯಾಗಿದ್ದರು. ಸದಾ ಸಾಮಾನ್ಯರಲ್ಲಿ ಸಾಮಾನ್ಯರಂತೆಯೇ ಇರುತ್ತಿದ್ದರು ಎಂದು ನೆನಪಿಸಿಕೊಂಡರು.
ನಾಲ್ಕು ತಿಂಗಳ ಹಿಂದೆ ಅಕಾಲಿಕವಾಗಿ ನಮ್ಮೆಲ್ಲರನ್ನೂ ಅಗಲಿಹೋದ ಪುನೀತ್ ತುಂಬಾ ಜನಪ್ರಿಯತೆ ಗಳಿಸಿದ್ದರು. ಅವರ ಸಮಾಧಿಗೆ ಇಂದಿಗೂ ಸಾವಿರಾರು ಜನರು ಭೇಟಿ ನೀಡುತ್ತಿರುವುದೇ ಅವರ ವ್ಯಕ್ತಿತ್ವ ಎಂತಹದ್ದು ಎಂಬುದಕ್ಕೆ ಸಾಕ್ಷಿ. ತಂದೆ ವರನಟ ಡಾ.ರಾಜಕುಮಾರ್ ಅವರಂತೆಯೇ ಮಾದರಿ ವ್ಯಕ್ತಿಯಾಗಿದ್ದ ಪುನೀತ್, ಸಾಮಾಜಿಕ ಕಳಕಳಿ ಹೊಂದಿದ್ದ ವ್ಯಕ್ತಿ. ಈ ಗುಣವೇ ಅವರಿಗೆ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿತ್ತು ಎಂದರು.
ಬಳಿಕ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕೇಕ್ ಕತ್ತರಿಸಿ ನೆರೆದಿದ್ದ 3 ಸಾವಿರಕ್ಕೂ ಹೆಚ್ಚು ಜನರಿಗೆ ಸಿಹಿ ಮತ್ತು ಉಪಹಾರ ವಿತರಿಸಲಾಯಿತು. ಪುನೀತ್ ಅಭಿಮಾನಿಗಳಿಗೆ ಸ್ವತಃ ಸಚಿವರೇ ಸಿಹಿ ಹಂಚಿದರು. ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಚಿತ್ರ ನಿರ್ಮಾಪಕ ಕೆ.ಸುರೇಶ್ ಗೌಡ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಯೋಗೀಶ್, ಚಿನ್ನಣ್ಣ ನಾಗರಾಜ್ ಮುಂತಾದವರು ಭಾಗಿಯಾಗಿದ್ದರು.