ಬೆಂಗಳೂರು : ಬೆಂಗಳೂರು ಮೆಡಿಕಲ್ ಕಾಲೇಜು ಬೆಸ್ಟ್ ಕಾಲೇಜ್ ಅನ್ನೋದರಲ್ಲಿ ಸಂದೇಹವಿಲ್ಲ. ಈ ಸಲ ಪದವಿ ಪಡೆದವರಲ್ಲಿ ಹೆಣ್ಣು ಮಕ್ಕಳದ್ದೇ ಸಿಂಹಪಾಲು. ಇದು ಮಹಿಳಾ ಸಬಲೀಕರಣಕ್ಕೆ ಸಾಕ್ಷಿ. ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಬದಲಾವಣೆ ಕಂಡಿದೆ. ಪ್ರತಿ ವರ್ಷ 65,000 ಎಂಬಿಬಿಎಸ್ ವೈದ್ಯರು ಮತ್ತು 30,000 ವೈದ್ಯರು ಸ್ನಾತಕೋತ್ತರ ಪದವಿ ಪಡೆದು ಸೇವೆಗೆ ಲಭ್ಯರಾಗುತ್ತಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದರು.
ಬೆಂಗಳೂರು ಮೆಡಿಕಲ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಇದು ದೇಶದಲ್ಲಿ ಮಹಿಳಾ ಸಬಲೀಕರಣದ ಸಂಕೇತ. ಸಮಾಜದಲ್ಲಿ ಬದಲಾವಣೆಗಳು ಆಗುತ್ತಿವೆ. ಬಡವರ ಮಕ್ಕಳು ಕೂಡ ವೈದ್ಯರಾಗಬೇಕೆಂಬ ಕನಸು ಈಡೇರುತ್ತಿದೆ ಎಂದರು.
4 ಸರ್ಕಾರಿ ಮೆಡಿಕಲ್ ಕಾಲೇಜು ಆರಂಭ : ಕರ್ನಾಟಕದಲ್ಲಿ ಒಟ್ಟು 65 ಮೆಡಿಕಲ್ ಕಾಲೇಜುಗಳಿವೆ. 4 ಸರ್ಕಾರಿ ಮೆಡಿಕಲ್ ಕಾಲೇಜುಗಳು ಶೀಘ್ರದಲ್ಲಿ ಆರಂಭವಾಗಲಿವೆ. ಖಾಸಗಿಯಲ್ಲಿ 3 ಹೆಚ್ವುವರಿ ಮೆಡಿಕಲ್ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ 9 ಜಿಲ್ಲೆಗಳಲ್ಲಿ ಹೊಸತಾಗಿ 9 ಮೆಡಿಕಲ್ ಕಾಲೇಜುಗಳು ಆರಂಭ ಮಾಡಲು ತಯಾರಿಗಳು ನಡೆಯುತ್ತಿವೆ. ದೇಶದ ವೈದ್ಯ ವಿದ್ಯಾರ್ಥಿಗಳಲ್ಲಿ ಶೇ.30.5ರಷ್ಟು ಕೊಡುಗೆ ಕರ್ನಾಟಕದ್ದಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ನಂತರ ಕರ್ನಾಟಕದಲ್ಲಿ ಅತೀ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತದೆ ಎಂದರು.
ವೈದ್ಯರ ಸೇವೆ ಸಮಾಜದಲ್ಲಿ ವಿಭಿನ್ನ ಗೌರವವನ್ನು ಹೊಂದಿದೆ. ಮನುಷ್ಯತ್ವ ಮತ್ತು ಸೇವೆಯನ್ನು ಒಂದೇ ಕಾಲದಲ್ಲಿ ಅಪೇಕ್ಷೆ ಮಾಡುವ ಕೆಲಸ ಇದಾಗಿದೆ. ಇದರಲ್ಲಿ ಆತ್ಮ ತೃಪ್ತಿಯೂ ಇದೆ. ಎಲ್ಲವನ್ನೂ ಮರೆತು ಸಮಾಜಕ್ಕಾಗಿ, ಇನ್ನೊಬ್ಬರಿಗಾಗಿ ಕೆಲಸ ಮಾಡಬೇಕಾಗುತ್ತದೆ. ಎಲ್ಲಾ ತ್ಯಾಗವನ್ನು ಮಾಡಲು ಸದಾ ಸಿದ್ಧರಿರಬೇಕಾದ ಕೆಲಸ ಇದು. ಎಲ್ಲಾ ಕ್ಷಣದಲ್ಲೂ, ಎಲ್ಲಾ ದಿನವೂ ವೈದ್ಯರು ಸಮಾಜದ ಬಗ್ಗೆ ಮಾತ್ರ ಯೋಚನೆ ಮಾಡಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ಆಯುಷ್ಮಾನ್ ಭಾರತ್ ಯೋಜನೆ ಎಲ್ಲರಿಗೂ ಉಚಿತ ಆರೋಗ್ಯ ವಿಮೆ ನೀಡುತ್ತಿದೆ. ಉಚಿತವಾಗಿ ಆರೋಗ್ಯ ವಿಮೆ ನೀಡುತ್ತಿರುವ ಏಕೈಕ ದೇಶ ಭಾರತವಾಗಿದೆ. ಶೂನ್ಯ ಪ್ರೀಮಿಯಂನಲ್ಲಿ 5 ಲಕ್ಷ ರೂಪಾಯಿ ತನಕ ಶಾಶ್ವತ ಆರೋಗ್ಯ ವಿಮೆಯನ್ನು ಸರ್ಕಾರ ನೀಡುತ್ತಿದೆ. ದೇಶದ ಬಡವರ ಆರೋಗ್ಯದ ಮೇಲೆ ಸರ್ಕಾರ ಹೆಚ್ಚಿನ ಗಮನವಿಟ್ಟಿದೆ ಎಂದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಹಿನ್ನೆಲೆ, ಅಭ್ಯರ್ಥಿಗಳಿಗೆ ಮರುಪರೀಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ