ಬೆಂಗಳೂರು: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಲಭ್ಯವಾಗದೇ ಸಾವನ್ನಪ್ಪಿದ ಕೋವಿಡ್ ಸೋಂಕಿತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ಆದೇಶ ಹೊರಡಿಸಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಕೋವಿಡ್ ನಿರ್ವಹಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರಾದ ಪ್ರತಿಮಾ ಹೊನ್ನಾಪುರ ಮಾಹಿತಿ ನೀಡಿ, ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ 24 ಕುಟುಂಬಗಳ ಪೈಕಿ 13 ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ಜುಲೈ 15 ರಂದು ಸರ್ಕಾರ ಆದೇಶ ಹೊರಡಿಸಿದೆ. ಈ 13 ಮೃತರ ಕುಟುಂಬಗಳಿಗೆ ಈ ಹಿಂದೆ ತಲಾ 2 ಲಕ್ಷ ರೂ. ಮಧ್ಯಂತರ ಪರಿಹಾರ ನೀಡಲಾಗಿದೆ. ಇದೀಗ ಹೈಕೋರ್ಟ್ ಸೂಚನೆಯಂತೆ 3 ಲಕ್ಷ ರೂ. ಸೇರಿಸಿ ಒಟ್ಟು ಐದು ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ವಿವರಿಸಿದರು.
ಇನ್ನುಳಿದ 11 ಮಂದಿ ಮೃತರು ಆಮ್ಲಜನದ ಕೊರತೆಯಿಂದ ಸಾವನ್ನಪ್ಪಿದ್ದಾರೆಯೇ ಎಂದು ತಿಳಿಯಬೇಕಿದೆ. ಸದ್ಯದ ಮಟ್ಟಿಗೆ ಅವರ ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲ. ಆದ್ದರಿಂದ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾ. ಬಿ.ಎ ಪಾಟೀಲ್ ಅವರ ಸಮಿತಿ ವರದಿ ನೀಡಿದ ನಂತರ 11 ಮಂದಿ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಚಾಮರಾಜನಗರ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ ನಂತರ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ನೀಡಿತ್ತು. ಡೆತ್ ಆಡಿಟ್ ರಿಪೋರ್ಟ್ ಆಧರಿಸಿ ಮೃತರ ಕುಟುಂಬಗಳಿಗೆ ಎರಡು ಲಕ್ಷ ಪರಿಹಾರ ನೀಡಿದ್ದು ಕಡಿಮೆಯಾಯಿತು ಎಂದು ಹೈಕೋರ್ಟ್ ಆಕ್ಷೇಪಿಸಿದ ನಂತರ ಸರ್ಕಾರ, ಪರಿಹಾರ ಹೆಚ್ಚಿಸಿತ್ತು. ಆದರೆ, ಈ ಪರಿಹಾರ ಮೊತ್ತದಲ್ಲಿ ಏರುಪೇರಾಗಿತ್ತು. ಚಿಕಿತ್ಸೆ ವೇಳೆ ಆಕ್ಸಿಜನ್ ಸಿಗದೆ ಸಾವನ್ನಪ್ಪಿದ ಮೂವರ ಕುಟುಂಬಕ್ಕೆ 5 ಲಕ್ಷ, ಆಕ್ಸಿಜನ್ ಸಿಕ್ಕ ಬಳಿಕ ಸಾವನ್ನಪ್ಪಿದವರ ಕುಟುಂಬಕ್ಕೆ 4 ಲಕ್ಷ ರೂ. ನಿಗದಿ ಮಾಡಿತ್ತು. ಇದನ್ನು ಒಪ್ಪದ ಹೈಕೋರ್ಟ್ ಆಮ್ಲಜನ ಪುನರ್ ಸ್ಥಾಪಿಸಿದ್ದರೂ ಕೂಡ ಈ ಮೊದಲಿಗೆ ಆಕ್ಸಿಜನ್ ಲಭ್ಯವಾಗದೇ ರೋಗಿ ಬಳಲಿರುವುದರಿಂದ ಅದು ಕೂಡ ಆಕ್ಸಿಜನ್ ಲಭ್ಯವಾಗಿಲ್ಲ ಎಂದೇ ಪರಿಗಣಿಸಿ ಪರಿಹಾರ ನೀಡುವಂತೆ ಸೂಚಿಸಿತ್ತು. ಈ ಹಿನ್ನೆಲೆ ಸರ್ಕಾರ ತನ್ನ ವರದಿ ಪ್ರಕಾರ ಆಕ್ಸಿಜನ್ ಸಿಗದೆ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಿದೆ.