ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಒತ್ತಾಯಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, 1.5 ಲಕ್ಷ ಸಕ್ರಿಯ ಕೊರೊನಾ ಸೋಂಕಿತರು ಬೆಂಗಳೂರಿನಲ್ಲಿದ್ದಾರೆ. ಇಡೀ ದೇಶದಲ್ಲೇ ಬೆಂಗಳೂರು ಸಕ್ರಿಯ ಕೊರೊನಾ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಮುಂಬೈ, ಪುಣೆ, ದೆಹಲಿ ನಗರಗಳಿಗಿಂತಲೂ ಕೊರೊನಾ ಬೆಂಗಳೂರನ್ನು ಹೆಚ್ಚಾಗಿ ಬಾದಿಸುತ್ತಿದೆ.
ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 124 ಸೋಂಕಿತರು ಮೃತಪಟ್ಟಿದ್ದಾರೆ, 16,662 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 1.5 ಲಕ್ಷ ಸಕ್ರಿಯ ಕೇಸ್ ಗಳಲ್ಲಿ ಕೇವಲ ಶೇ5 ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗಳಲ್ಲಿದ್ದರೆ, ಉಳಿದವರು ಮನೆಗಳಲ್ಲಿದ್ದಾರೆ ಎಂದು ಪಾಟೀಲ್ ಮಾಹಿತಿ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಸರ್ಕಾರ ಕೋವಿಡ್ ಗಾಗಿ ಮೀಸಲಿಟ್ಟಿರುವ ಬೆಡ್ ಗಳ ಸಂಖ್ಯೆ ಕೇವಲ 9,729. ಇದು ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ಗಳು ಎಲ್ಲವೂ ಸೇರಿ. 1.5 ಲಕ್ಷ ಸಕ್ರಿಯ ಸೋಂಕಿತರಿರುವ ಬೆಂಗಳೂರಿಗೆ ಇಷ್ಟು ಬೆಡ್ ಗಳು ಸಾಕಾ..? ಸರ್ಕಾರ ಈ ಕೂಡಲೇ ಬೆಂಗಳೂರಿನ ಕಲ್ಯಾಣ ಮಂಟಗಳು, ಹೋಟೆಲ್ ಗಳನ್ನು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತಿಸಬೇಕು. ಜತೆಗೆ ಬೆಂಗಳೂರು ಅರಮನೆ ಮೈದಾನ, ಬಿಐಇಸಿ ಯಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಆರಂಭಿಸಬೇಕು ಎಂದು ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ ಎಂದು ಇದೇ ವೇಳೆ ಆಗ್ರಹಿಸಿದರು.
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಐಸಿಯು ಮತ್ತು ವೆಂಟಿಲೇಟರ್ ನ ವಿಪರೀತ ಕೊರತೆಯಿದೆ. ಈ ಕಾರಣದಿಂದ ಅತಿ ಹೆಚ್ಚು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಕೂಡಲೇ ಕನಿಷ್ಠ 2 ಸಾವಿರ ಐಸಿಯು ಮತ್ತು ವೆಂಟಿಲೇಟರ್ ಬೆಡ್ಗಳ ವ್ಯವಸ್ಥೆ ಮಾಡಬೇಕು. ಇದು ಕೊರೊನಾ 2ನೇ ಅಲೆಯ ಆರಂಭವಷ್ಟೇ ಎಂದು ತಜ್ಞರು ಹೇಳುತ್ತಿದ್ದಾರೆ. ಮೇ. 15 ರ ವೇಳೆಗೆ ಬೆಂಗಳೂರೊಂದರಲ್ಲೇ ಪ್ರತಿ ದಿನ 50 ಸಾವಿರ ಕೇಸ್ ಪತ್ತೆಯಾಗುವ ಎಚ್ಚರಿಕೆ ಕೊಟ್ಟಿದ್ದಾರೆ. ಈ ಎಚ್ಚರಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಈಗಿನಿಂದಲೇ ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದು ಬಿಟ್ಟು ಇಡೀ ವೈದ್ಯಕೀಯ ವ್ಯವಸ್ಥೆಯನ್ನು ಈಗಿನಿಂದಲೇ ಸಜ್ಜುಗೊಳಿಸಿದರೆ ಜನಸಾಮಾನ್ಯರು ಚಿಕಿತ್ಸೆ ಸಿಗದೇ, ಬೆಡ್ ಸಿಗದೇ ಸಾಯುವ ಸ್ಥಿತಿಯನ್ನು ತಪ್ಪಿಸಿದಂತಾಗುತ್ತದೆ. ಮುಖ್ಯಮಂತ್ರಿಗಳೇ ಎಚ್ಚೆತ್ತುಕೊಳ್ಳಿ ಎಂದು ಎಚ್ಚರಿಕೆ ಸಂದೇಶವನ್ನು ಪಾಟೀಲ್ ರವಾನಿಸಿದ್ದಾರೆ.