ಬೆಂಗಳೂರು: ನಗರದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ರಾಜ್ಯಸರ್ಕಾರ ಆದೇಶಿಸಿದೆ.
ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಅವರನ್ನು ತನಿಖೆಗೆ ನೇಮಕ ಮಾಡಲಾಗಿದೆ. ಗೋಲಿಬಾರ್ ವೇಳೆ ಮೂವರು ಯುವಕರು ಮೃತಪಟ್ಟಿರುವ ಕುರಿತು, ಸಾವಿಗೆ ಕಾರಣ, ಅಂದು ನಡೆದ ಘಟನಾವಳಿಗಳ ಸರಣಿ ಮತ್ತು ಸನ್ನಿವೇಶ ಬಗ್ಗೆ ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ. ವಿಚಾರಣೆಯ ವರದಿಯನ್ನು ಮೂರು ತಿಂಗಳಲ್ಲಿ ನೀಡುವಂತೆ ಸರ್ಕಾರ ಆದೇಶಿಸಿದೆ.
ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಯಾಸಿನ್ ಪಾಷಾ, ವಾಜೀದ್ ಖಾನ್ ಮತ್ತು ಶೇಖ್ ಸಿದ್ಧಿಕ್ ಮೃತಪಟ್ಟಿದ್ದಾರೆ. ಈ ಘಟನೆ ಕುರಿತು ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಮೂರು ತಿಂಗಳಲ್ಲಿ ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ.