ಬೆಂಗಳೂರು: ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಗರಿಷ್ಠ ಮಟ್ಟಕ್ಕೆ ಚಿನ್ನದ ಬೆಲೆ ಏರಿಕೆಯಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ ₹4000 ಹಾಗೂ 916 ಹಾಲ್‌ಮಾರ್ಕ್ ಸೀಲ್ ಇರುವ ಚಿನ್ನಕ್ಕೆ ಗ್ರಾಂಗೆ ₹3,750 ಆಗಿದೆ. ಅಷ್ಟಲ್ಲದೇ ಬೆಳ್ಳಿಯ ದರವೂ ಸಹ ಏರಿಕೆಯಾಗುತ್ತಿದೆ.
ಅಷ್ಟಕ್ಕೂ ಹೀಗೆ ದಿಢೀರ್ ಚಿನ್ನದ ಬೆಲೆ ಏರಿಕೆ ಕಾರಣ ರೂಪಾಯಿಯ ಅಪಮೌಲ್ಯವಾಗಿರೋದು ಕಾರಣ ಎನ್ನಲಾಗುತ್ತಿದೆ. ಇದರ ಜೊತೆಗೆ 12.5% ಕಸ್ಟಮ್ ಡ್ಯೂಟಿ, 100 ಪರ್ಸೆಂಟ್ ಜಿಎಸ್ಟಿ ಸೇರಿಕೊಳ್ಳುವ ಕಾರಣ ಚಿನ್ನ ದುಬಾರಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಅನಿಶ್ಚಿತತೆ, ಯುದ್ಧದ ಭೀತಿ, ಷೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. 4,500 ರೂ.ವರೆಗೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವವರು ಯಾವುದೇ ರೀತಿಯ ಆತುರದ ನಿರ್ಧಾರಗಳನ್ನು ಕೈಗೊಳ್ಳದೇ ಇದರ ಲಾಭ ಪಡೆಯಬಹುದು.
ಇನ್ನು ಎಷ್ಟೇ ಬೆಲೆ ಏರಿಕೆ ಆದರೂ ಚಿನ್ನದ ಮಾರುಕಟ್ಟೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಯಾಕೆಂದರೆ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಅನಿವಾರ್ಯವಾಗಿ ಚಿನ್ನವನ್ನು ಖರೀದಿಸುವ ಪ್ರಸಂಗ ಬರುತ್ತೆ. ಹೂಡಿಕೆಗಾಗಿ ಚಿನ್ನ ಖರೀದಿಸುವವರ ಸಂಖ್ಯೆ ಕಡಿಮೆ. ಆದರೆ, ಬಳಕೆಗೆ ಖರೀದಿಸುವವರ ಸಂಖ್ಯೆ ಜಾಸ್ತಿ ಇರುವುದರಿಂದ ಚಿನ್ನದ ಮಾರುಕಟ್ಟೆ ಮತ್ತು ವ್ಯಾಪಾರ ಸಾಮಾನ್ಯವಾಗಿ ನಡೆಯುತ್ತದೆ ಎಂದು ಬೆಂಗಳೂರು ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಬಾಬು ತಿಳಿಸಿದರು.