ದೊಡ್ಡಬಳ್ಳಾಪುರ: ಕೊರೊನಾ ಹಿನ್ನೆಲೆ ಪೋಷಕರು ಎರಡು ವರ್ಷದಿಂದ ಮಕ್ಕಳ ಶಾಲಾ ಶುಲ್ಕ ಕಟ್ಟಿರಲಿಲ್ಲ. ಶುಲ್ಕ ವಸೂಲಾತಿಗೆ ಇಳಿದ ದೊಡ್ಡಬಳ್ಳಾಪುರ ತಾಲೂಕಿನ ಜ್ಞಾನಗಂಗಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕೂರಿಸಿ ಪೋಷಕರ ಮೇಲೆ ಒತ್ತಡ ಹಾಕುವ ತಂತ್ರ ಹಾಕುತ್ತಿದೆ.
ಕೊರೊನಾ ಕಡಿಮೆಯಾಗುತ್ತಿರುವ ಹಿನ್ನೆಲೆ ಸರ್ಕಾರ ಶಾಲೆಗಳನ್ನು ಆರಂಭಿಸಿಸಲು ಆದೇಶಿಸಿದೆ. ಆದರೆ, ಕಳೆದ ವರ್ಷದಿಂದ ಪೋಷಕರು ಶಾಲೆಯ ಕಡೆ ಮುಖ ಮಾಡಿಲ್ಲ, ಬಾಕಿ ಉಳಿದಿರುವ ಫೀಸ್ ಕಟ್ಟಿಲ್ಲ ಎಂದು ಜ್ಞಾನಗಂಗಾ ವಿದ್ಯಾಸಂಸ್ಥೆ ಮಕ್ಕಳನ್ನು ತರಗತಿಯಿಂದ ಹೊರಗೆ ಕೂರಿಸಿ ಪೋಷಕರಿಂದ ಶುಲ್ಕ ವಸೂಲಿಗೆ ಇಳಿದಿದೆ.
ತನ್ನ ಕ್ರಮ ಸಮರ್ಥಿಸಿಕೊಂಡ ಶಾಲಾ ಆಡಳಿತ ಮಂಡಳಿ
ಕಳೆದ ಎರಡು ವರ್ಷದಿಂದ ಪೋಷಕರು ಶಾಲೆಗಳತ್ತ ಮುಖ ಮಾಡಿಲ್ಲ. ಹಲವು ಬಾರಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಮಕ್ಕಳನ್ನು ತರಗತಿಯಿಂದ ಹೊರಗೆ ಕೂರಿಸಲಾಗಿದೆ. ಸರ್ಕಾರದ ನಿಯಮದಂತೆ ಶೇ. 70ರಷ್ಟು ಮಾತ್ರ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಕೆಲ ಪೋಷಕರಿಂದ ಎಷ್ಟು ಹಣ ಕಟ್ಟಲು ಸಾಧ್ಯವೋ ಅಷ್ಟು ಮಾತ್ರ ಕಟ್ಟಿಸಿಕೊಳ್ಳಲು ಹೇಳಲಾಗಿದೆ.
ಆದ್ರೆ ಶಾಲೆಯ ಬಳಿಗೂ ಬರದೇ ಮೊಂಡು ಬಿದ್ದಿರುವ ಪೋಷಕರಿಗೆ ಮನವರಿಕೆ ಮಾಡಿಕೊಡಲು ಈ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಮಕ್ಕಳು ಶಾಲೆಯಿಂದ ಮನೆಗೆ ಹೋಗಿ ತಮ್ಮ ಪೋಷಕರ ಬಳಿ ಹೇಳಿದಾಗ, ಆಗಲಾದರೂ ಶಾಲೆಯ ಕಡೆ ಮುಖ ಮಾಡುತ್ತಾರೆ ಎಮದು ಹೀಗೆ ಮಾಡಿದ್ದೇವೆ.
ಷೋಷಕರೂ ಸಹ ಆಡಳಿತ ಮಂಡಳಿಯ ಕಷ್ಟ ಸುಖಗಳನ್ನು ಅರಿತುಕೊಳ್ಳಬೇಕಿದೆ. ನಮಗೂ ಶಾಲೆಯನ್ನು ನಡೆಸಲು ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳನ್ನು ಹೊರಗೆ ಕೂರಿಸಿದ ಬಗ್ಗೆ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ.
’’ಸರ್ಕಾರದ ಮಾರ್ಗಸೂಚಿ ಪ್ರಕಾರ ತರಗತಿಯಿಂದ ಹೊರಕ್ಕೆ ಹಾಕುವಂತಿಲ್ಲ’’
ಜ್ಞಾನಗಂಗಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಮೇಲೆ ನಡೆಸಿದ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಇಒ ಶುಭಮಂಗಳ, ಸರ್ಕಾರದ ಮಾರ್ಗಸೂಚಿಯಂತೆ ಯಾರೂ ಕೂಡ ಮಕ್ಕಳನ್ನು ತರಗತಿಯಿಂದ ಹೊರಗೆ ಕೂರಿಸಬಾರದು. ಶಾಲಾ ಶುಲ್ಕ ಕಟ್ಟುವ ವಿಷಯ ಪೋಷಕರು ಮತ್ತು ಆಡಳಿತ ಮಂಡಳಿಗೆ ಸೇರಿದ್ದು. ಅವರು ಕುಳಿತು ಮಾತನಾಡಿಕೊಳ್ಳಬೇಕು. ಸರ್ಕಾರ ಎಷ್ಟು ಶುಲ್ಕವನ್ನು ನಿಗದಿ ಮಾಡಿದೆಯೋ ಅಷ್ಟು ಮಾತ್ರ ಶುಲ್ಕ ವಸೂಲಿ ಮಾಡಬೇಕು.
ಇದನ್ನೂ ಓದಿ: ಹೆದ್ದಾರಿಯಲ್ಲಿ ಪುಷ್ಪ ಲೋಕ ಅನಾವರಣ: ಮನಸೆಳೆಯುತ್ತಿರುವ ಹೂವುಗಳು
ಅದು ಬಿಟ್ಟು ಈ ರೀತಿ ಮಕ್ಕಳನ್ನು ಹೊರಗೆ ಕೂರಿಸಿದ್ದು ತಪ್ಪು. ಹೀಗಾಗಿ ನಾವು ಶಾಲೆಗೆ ಭೇಟಿ ನೀಡಿ ಎಚ್ಚರಿಕೆ ನೀಡಲಾಗುವುದು. ಫೀಸ್ ಕಟ್ಟಿಲ್ಲ ಎಂದು ಮಕ್ಕಳನ್ನು ಆನ್‌ಲೈನ್ ತರಗತಿಯಿಂದ ಮತ್ತು ಶಾಲಾ ಕೊಠಡಿಯಿಂದ ಹೊರಗೆ ಕೂರಿಸಬಾರದು. ಈ ವಿಷಯವಾಗಿ ಈಗಾಗಲೇ ಕಟ್ಟುನಿಟ್ಟಾಗಿ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ನಿಂದ ಬಹಳಷ್ಟು ಜನರ ಸ್ಥಿತಿ ಹದಗೆಟ್ಟಿದೆ. ಫೀಸ್ ಕಟ್ಟಿಲ್ಲ ಎಂದರೆ ಒಂದು ವೇಳೆ ಕಂತುಗಳಲ್ಲಿ ಹಣ ವಸೂಲಿ ಮಾಡಬೇಕು. ಸರ್ಕಾರ ಮಕ್ಕಳನ್ನು ಶಿಕ್ಷಣದಿಂದ ಹೊರಗೆ ಉಳಿಸಬಾರದು ಎಂದು ಕಟ್ಟು ನಿಟ್ಟಿನ ಸುತ್ತೋಲೆ ಹೊರಡಿಸಲಾಗಿದೆ. ತಾಲೂಕಿನಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಇಒ ಹೇಳಿದ್ದಾರೆ.