ಬೆಂಗಳೂರು : ಶಬ್ದ ಮಾಲಿನ್ಯವನ್ನು ಮಾಪನ ಮಾಡಲು ರಾಜ್ಯಕ್ಕೆ ಎಷ್ಟು ಮಾಪಕಗಳನ್ನು ಖರೀದಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ನಿರ್ದೇಶಿಸಿದೆ. ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು. ಕೆಲಕಾಲ ವಾದ ಆಲಿಸಿದ ಪೀಠ, ಬೆಂಗಳೂರು ನಗರದಲ್ಲಿ ಶಬ್ದ ಮಾಲಿನ್ಯವನ್ನು ಅಳೆಯಲು ಪ್ರತಿ ಪೊಲೀಸ್ ಠಾಣೆಗೆ ಎರಡು ಮತ್ತು ಗ್ರಾಮೀಣ ಭಾಗದ ಠಾಣೆಗೆ ತಲಾ ಒಂದು ಶಬ್ದ ಮಾಪಕ ಅಗತ್ಯವಿದೆ ಎಂದು ಹೇಳಿದೆ.
ಮಾಪನ ಇಲ್ಲದಿರುವುದರಿಂದ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು ಜಾರಿಯಾಗುತ್ತಿಲ್ಲ. ಇದನ್ನು ಪೊಲೀಸ್ ಮಹಾನಿರ್ದೇಶಕರು ಗಮನಿಸಿ, ರಾಜ್ಯಕ್ಕೆ ಎಷ್ಟು ಮಾಪನಗಳ ಅಗತ್ಯವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ಮಾಪಕ ಬೇಕಿದೆ. ಈಗಾಗಲೇ ಎಷ್ಟು ಮಾಪಕ ಖರೀದಿಸಲಾಗಿದೆ. ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು ಎಂಬ ಬಗ್ಗೆ ಜೂನ್ 30ರೊಳಗೆ ಸವಿವರವಾದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಇದನ್ನೂ ಓದಿ: ಪೊಲೀಸರಿಂದಲೇ ಚಿನ್ನ ಕಳವು ಪ್ರಕರಣ: ಆರೋಪಿ ಮತ್ತೆ ಸಿಐಡಿ ಕಸ್ಟಡಿಗೆ
ಅಲ್ಲದೆ, ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೊಳಿಸುವಲ್ಲಿ ವಿಳಂಬ ಮಾಡಿರುವ ಸರ್ಕಾರದ ಧೋರಣೆಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಶಬ್ದ ಮಾಲಿನ್ಯ ಕಾಯ್ದೆ ಜಾರಿಯಾಗಿ ಬರೋಬ್ಬರಿ 20 ವರ್ಷ ಕಳೆದಿದೆ. ಆದರೂ ಕಾಯ್ದೆಯ ನಿಯಮಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. ಶಬ್ದ ಮಾಲಿನ್ಯವನ್ನು ಅಳೆಯಲು ಅನುಕೂಲವಾಗುವ ಮಾಪನಗಳನ್ನೂ ಖರೀದಿಸಿಲ್ಲ. ಕಾಯ್ದೆಯ ನಿಯಮಗಳನ್ನು ಜಾರಿಗೊಳಿಸಲು ಇಷ್ಟು ಸುಧೀರ್ಘ ಅವಧಿ ವಿಳಂಬ ಮಾಡುವ ಮೂಲಕ ಸರ್ಕಾರ ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಪೀಠ ಸರ್ಕಾರವನ್ನು ಟೀಕಿಸಿತು.