ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ನಿನ್ನೆ(ಸೋಮವಾರ) ಹುಂಡಿ ಕಾಣಿಕೆ ಎಣಿಕೆ ಮಾಡಲಾಗಿದ್ದು, 64,66,752 ರೂ. ಸಂಗ್ರಹವಾಗಿದೆ. ಇದರೊಂದಿಗೆ 77,500 ರೂ. ಮೌಲ್ಯದ 2 ಕೆ.ಜಿ 200 ಗ್ರಾಂ ಬೆಳ್ಳಿ, 66,300 ರೂ. ಮೌಲ್ಯದ 10.5 ಗ್ರಾಂ ಚಿನ್ನವನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಹರಕೆ ತೀರಿಸಿದ್ದಾರೆ.
ಹುಂಡಿಯನ್ನು ನಿಯಮಾನುಸಾರ ತೆಗೆದು ಎಣಿಸಲಾಗಿದೆ. ಎಣಿಕೆ ಕಾರ್ಯದಲ್ಲಿ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಸಹಾಯಕ ಆಯುಕ್ತೆ ಜಿ.ಜೆ ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಡಿ.ನಾಗರಾಜ್, ಪ್ರಧಾನ ಅರ್ಚಕ ಎಸ್.ಎನ್. ಸುಬ್ಬಕೃಷ್ಣಶಾಸ್ತ್ರಿ, ದೇವಾಲಯದ ಸೂಪರಿಂಟೆಂಡೆಂಟ್ ರಘು ಹುಚ್ಚಪ್ಪ ಸೇರಿದಂತೆ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್, ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು.