ಬೆಂಗಳೂರು: ನಾನು ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಬಂದರೆ ನನ್ನ ಶಾಪ ವಿಮೋಚನೆ ಆಗುತ್ತದೆ. ಶಾಪ ವಿಮೋಚನೆ ಮಾಡಿದರೆ ನನಗೆ ಬರೀ ಮೂರೂವರೆ ವರ್ಷ ಸಾಕು. ಸರ್ಕಾರದಲ್ಲಿ ನಾನು ಕೆಲಸ ಮಾಡಬಲ್ಲೆ, ಐ ಕ್ಯಾನ್ ಡೂ ವಂಡರ್ಸ್ ಎಂದು ಎಂಎಲ್ಸಿ ಎಚ್. ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಉಪಚುನಾವಣೆಯಲ್ಲಿ ಸ್ಫರ್ಧಿಸುವ ವಿಚಾರ ಕುರಿತು ನಾನು ದೆಹಲಿ ವರಿಷ್ಠರು, ರಾಜ್ಯದ ವರಿಷ್ಠರು ಮತ್ತು ಸಿಎಂ ಗಮನಕ್ಕೆ ತಂದಿದ್ದೇನೆ. ನಾಮ ನಿರ್ದೇಶಿತನಾದ ನನಗೆ ಇನ್ನೂ ಐದೂವರೆ ವರ್ಷ ಅವಧಿ ಇದೆ. ನನಗೆ ಸುಪ್ರೀಂಕೋರ್ಟ್ ಶಾಪ ವಿಮೋಚನೆ ಆಗಬೇಕಾದರೆ ನಾನು ಚುನಾವಣೆ ಮೂಲಕವೇ ಬರಬೇಕು. ಹಾಗಾಗಿ ಧರ್ಮೇಗೌಡರಿಂದ ಖಾಲಿಯಾದ ಸ್ಥಾನದ ಮೂಲಕ ನಾನು ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಬಂದರೆ ಶಾಪ ವಿಮೋಚನೆ ಆಗುತ್ತದೆ. ಸರ್ಕಾರದಲ್ಲಿ ಕೂಡ ಜವಾಬ್ದಾರಿಗಳನ್ನು ಕೊಟ್ಟರೆ ನಾನು ನಿರ್ವಹಿಸಬಲ್ಲೆ ಎಂದರು.
ಇದನ್ನೂ ಓದಿ.. WATCH: ಹೊಸಪೇಟೆ ಕೋರ್ಟ್ ಆವರಣದಲ್ಲಿ ವಕೀಲನ ಹತ್ಯೆಯ ಮೈ ಜುಂ ಎನ್ನುವ ದೃಶ್ಯ
ಈಗಾಗಲೇ ಸಾಕಷ್ಟು ಜವಾಬ್ದಾರಿ ನಿರ್ವಹಿಸಿದ್ದೇನೆ, ನಾನು ಮಂತ್ರಿಯಾಗಿದ್ದಾಗ ಸರ್ಕಾರಿ ಶಾಲೆಗಳಿಗೆ ಏಕಕಾಲಕ್ಕೆ ಕಾಂಪೌಂಡ್, ಶೌಚಾಲಯ, ಸೌಲಭ್ಯ ಕಲ್ಪಿಸಿದ್ದೆ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆ ಇರುವ ಬಗ್ಗೆ ಪತ್ರಿಕೆಗಳಲ್ಲಿ ನೋಡಿದ್ದೇನೆ ಹಾಗಾಗಿ ನನಗೆ ಒಂದು ಜವಾಬ್ದಾರಿ ಕೊಡಿ, ಶಾಪ ವಿಮೋಚನೆ ಮಾಡಿ ನನಗೆ ಬರೀ ಮೂರೂವರೆ ವರ್ಷ ಸಾಕು. ಐದೂವರೆ ವರ್ಷ ಯಾರಿಗೆ ಬೇಕಾದರೂ ಕೊಡಿ, ಈಗ ಆಗಿರುವ ವ್ಯತ್ಯಾಸಗಳನ್ನು ದಯವಿಟ್ಟು ಸರಿ ಮಾಡಿ ಕೊಡಿ ಎಂದು ಕೇಳುತ್ತಿದ್ದೇನೆ ಎಂದರು.
ಬಿಗ್ ಬಾಸ್ ಮನೆಗೆ ಹೋಗಲು ಸಿದ್ದ:
ಬಿಗ್ ಬಾಸ್ ಸೀಸನ್ 6ಗೆ ಆಹ್ವಾನ ಕೊಟ್ಟಿದ್ದರು, ಒಪ್ಪಿಕೊಂಡಿದ್ದೆ. ಆಗ ಆರೋಗ್ಯ ಸಮಸ್ಯೆಯಿಂದ ಹೋಗಲು ಆಗಿರಲಿಲ್ಲ. ಈಗ ಕೆಲ ಸ್ನೇಹಿತರು ಹೋಗ್ತೀರಾ ಎಂದು ಕೇಳ್ತಿದ್ದಾರೆ. ನನಗೂ ಹೋಗಲು ಆಸೆ ಇತ್ತು, ಒಂದು ವೇದಿಕೆ ಸಿಕ್ಕಿದಂತಾಗುತ್ತದೆ ಎಂದು ಯೋಚನೆ ಮಾಡಿದ್ದೆ. ಚುನಾವಣೆಗಳು ಬಂದಿವೆ, ಅಲ್ಲಿ ಇಲ್ಲಿ ಜವಾಬ್ದಾರಿ ಹಾಕ್ತಾರೆ, ಹಾಗಾಗಿ ಹೋಗಲು ಸ್ವಲ್ಪ ಕಷ್ಟ ಆಗಬಹುದು, ವಿಶೇಷ ಆಹ್ವಾನಿತರಾಗಿ ಬನ್ನಿ ಎಂದು ಕರೆದರೆ ಮೂರ್ನಾಲ್ಕು ದಿನಕ್ಕೆ ಹೋಗಬಹುದು ಎಂದು ವಿಶ್ವನಾಥ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದರು.
ಬಿಗ್ ಬಾಸ್ ಮನೆಯಲ್ಲಿ ಯುವಕರು, ಸಿನಿಮಾದವರು, ಗಂಡುಮಕ್ಕಳು, ಹೆಣ್ಣುಮಕ್ಕಳು ಇದ್ದಾರೆ. ಅಲ್ಲಿ ನಾನು ರಾಜಕಾರಣದ ಸ್ಪಾರ್ಕ್ ಹಚ್ಚಿಸಬಹುದು, ನಾನು ಅದನ್ನು ಅಲ್ಲಿ ಕ್ರಿಯೇಟ್ ಮಾಡಬಲ್ಲೆ, ಅವಕಾಶ ಸಿಕ್ಕಿದರೆ ಖಂಡಿತಾ ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.